ಟಾಲ್‌ಸ್ಟಾಯ್‌ನ ‘ರೆಸರಕ್ಷನ್’: ಈ ಕಾಲದ ಮರು ಭೇಟಿ
ಜೈಲುಗಳನ್ನು ಸೃಷ್ಟಿ ಮಾಡುವ ಮನಸ್ಸುಗಳು, ಸಮಾಜವನ್ನೇ ಜೈಲಾಗಿಸುವ ಪ್ರಭುತ್ವಗಳು ರೋಗಪೀಡಿತ ಸಮಾಜವನ್ನು ಸೃಷ್ಟಿಸುತ್ತಿರುತ್ತವೆ. ಈ ಭೀಕರ ಬೆಳವಣಿಗೆಗಳನ್ನು ತನ್ನ ಕಣ್ಣೆದುರೇ ಕಂಡ ಟಾಲ್‌ಸ್ಟಾಯ್ ಹತ್ತೊಂಬತ್ತನೇ ಶತಮಾನದ ರಶ್ಯನ್ ಸಮಾಜವನ್ನು ನೋಡುತ್ತಾ ದಿಗ್ಭ್ರಮೆಗೊಂಡು ಬರೆದ. ಜಗತ್ತಿನ ಶ್ರೇಷ್ಠ ಲೇಖಕರ ಸಾಲಿನಲ್ಲಿರುವ ಟಾಲ್‌ಸ್ಟಾಯ್ ಕಾದಂಬರಿಯ ತುಂಬಾ ಹಬ್ಬಿರುವ ಆ ಕಾಲದ ವ್ಯಗ್ರತೆ ಇವತ್ತಿನ ಇಂಡಿಯಾದ ವ್ಯಗ್ರತೆಯಂತೆಯೇ ಇದೆ...
ನಾವು ಮೀಡಿಯೋಕರ್ ಸಂಸ್ಕೃತಿಯನ್ನೇ ಆದರ್ಶ ಸಂಸ್ಕೃತಿ ಎಂದು ಬಿಂಬಿಸುತ್ತಿದ್ದರೆ ತಲೆಮಾರುಗಳೇ ಅಭಿರುಚಿಹೀನವಾಗುತ್ತವೆ. ನಮಗೆ ಟಾಲ್‌ಸ್ಟಾಯ್ ಯಾಕೆ? ಶೇಕ್ಸ್‌ಪಿಯರ್ ಯಾಕೆ? ಹೀಗೆಲ್ಲ ‘ದೇಶಭಕ್ತ’ರಂತೆ ಕೂಗುತ್ತಿದ್ದರೆ ಮಾನವ ಮನಸ್ಸನ್ನು, ಚರಿತ್ರೆಯ ಚಲನೆಗಳನ್ನು ಗ್ರಹಿಸುವ ಜೀನಿಯಸ್‌ಗಳ ಒಳನೋಟಗಳೇ ನಮಗೆ ಧಕ್ಕದೆ ಹೋಗುತ್ತವೆ.
ಕೆಲವು ವರ್ಷಗಳ ಕೆಳಗೆ ಟಾಲ್‌ಸ್ಟಾಯ್‌ನ ‘ರೆಸರಕ್ಷನ್’ ಕೃತಿಯನ್ನು ಓದುತ್ತಾ ಓದುತ್ತಾ ಶ್ರೇಷ್ಠ ಲೇಖಕರ ಕೃತಿಗಳು ಹೇಗೆ ಎಲ್ಲ ಕಾಲದ, ಎಲ್ಲ ದೇಶಗಳ ಸತ್ಯವನ್ನೂ ಹೇಳುತ್ತವೆ ಎಂಬುದು ಮನವರಿಕೆಯಾಗತೊಡಗಿತು. ಈ ಕಾದಂಬರಿ ಇವತ್ತಿನ ಇಂಡಿಯಾಕ್ಕೆ ಹಿಡಿದ ಕನ್ನಡಿಯಂತೆಯೂ ಕಾಣತೊಡಗಿತು. ಯಾವುದೇ ಲೇಖಕ, ಲೇಖಕಿ ಯಾವ ಜಾತಿ, ವರ್ಗ, ದೇಶದಿಂದ ಬಂದಿದ್ದಾರೆ ಎಂಬುದರ ಬಗೆಗೇ ತಲೆ ಕೆಡಿಸಿಕೊಂಡು ಓದುವುದನ್ನು ರೂಢಿ ಮಾಡಿಕೊಂಡರೆ ನಮ್ಮ ಓದು ಸೀಮಿತವಾಗುತ್ತದೆ ಎಂಬುದೂ ಹೊಳೆಯತೊಡಗಿತು.
ಚಾರಿತ್ರಿಕವಾಗಿ ನೋಡಿದರೆ, ‘ರೆಸರಕ್ಷನ್’ ಹತ್ತೊಂಬತ್ತನೇ ಶತಮಾನದ ರಶ್ಯದ ಕತೆ:
ಹೊಸ ಹುಡುಗರು ನ್ಯಾಯ ಕೇಳುತ್ತಿದ್ದಾರೆ. ಓದಿದ ಹುಡುಗಿಯರು ಬಂಡೆದ್ದಿದ್ದಾರೆ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಅಪರಾಧ ಮಾಡಿದವರೂ, ಅಪರಾಧ ಮಾಡದಿರುವವರೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಕೊಡುತ್ತಿರುವ ನ್ಯಾಯಾಧೀಶರು ಅಪರಾಧಿಗಳಿಗಿಂತ ಘೋರ ಅಪರಾಧಗಳನ್ನು ಮಾಡಿದ್ದಾರೆ. ಸರಕಾರದ ಮಂದಿಯಂತೂ ತಮ್ಮ ಅಧಿಕಾರ, ಆದಾಯಗಳನ್ನು ಕಾಯ್ದುಕೊಳ್ಳುವುದರಲ್ಲೇ ನಿರತರಾಗಿದ್ದಾರೆ. 1899ರಲ್ಲಿ ಬಂದ ‘ರೆಸರೆಕ್ಷನ್’ ಕಾದಂಬರಿಯನ್ನು ದೇಜಗೌ ‘ಪುನರುತ್ಥಾನ’ ಎಂದು ಕನ್ನಡಿಸಿದ್ದಾರೆ.
ಕಾದಂಬರಿಯ ಕೇಂದ್ರ ಪಾತ್ರ ಮೂವತ್ತೈದರ ಹರೆಯದ ಸೂಕ್ಷ್ಮ ಮನಸ್ಸಿನ ರಾಜಕುಮಾರ ಡಿಮಿಟ್ರಿ ನೆಕ್ಲುಡೋಫ್; ಆದರೆ ಕಾದಂಬರಿಯ ನಿಜವಾದ ಕೇಂದ್ರ ಪಾತ್ರ ಕಟುಶಾ. ತನ್ನ ಬದುಕಿನ ಘೋರ ತಿರುವುಗಳಿಂದಾಗಿ ವೇಶ್ಯೆಯಾದಾಗ ಆಕೆಯ ಹೆಸರು ಮಾಸ್ಲೋವ ಆಗುತ್ತದೆ. ಗಿರಾಕಿಯೊಬ್ಬನಿಗೆ ವಿಷವುಣಿಸಿದ ಆಪಾದನೆಯ ಮೇಲೆ ಮಾಸ್ಲೋವ ವಿಚಾರಣೆ ಎದುರಿಸುತ್ತಿದ್ದಾಳೆ.
ಹತ್ತೊಂಬತ್ತನೆಯ ಶತಮಾನದ ರಶ್ಯವನ್ನು ಆಳುತ್ತಿದ್ದ ದೊರೆಗಳ ಕಾಲದಲ್ಲಿ ಈಗಿನ ಥರದ ನ್ಯಾಯಾಲಯಗಳಿರಲಿಲ್ಲ. ಸಮಾಜದ ‘ಗಣ್ಯರು’ ನ್ಯಾಯಮಂಡಳಿಗಳ ಸದಸ್ಯರು. ಅವತ್ತು ನ್ಯಾಯಮಂಡಳಿಯಲ್ಲಿ ಕೂತು ನ್ಯಾಯ ನೀಡಲಿರುವವರಿಗೆ ತುರ್ತು ಕೆಲಸಗಳಿವೆ. ಮಂಡಳಿಯ ಅಧ್ಯಕ್ಷನಿಗೆ ಸರಸರನೆ ವಿಚಾರಣೆ ಮುಗಿಸಿ ಪ್ರೇಯಸಿಯನ್ನು ಕಾಣುವ ಕಾತರ. ಬೆಳಗ್ಗಿನ ಜಾವದವರೆಗೂ ಪಾರ್ಟಿಯೊಂದರಲ್ಲಿ ಇಸ್ಪೀಟಾಡುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಅವತ್ತಿನ ಕೇಸಿನ ಎಳೆಗಳೇ ಗೊತ್ತಿಲ್ಲ. ಬ್ರಾಂಡಿಯ ಸುವಾಸನೆ ಸೂಸುತ್ತಿರುವ ಮತ್ತೊಬ್ಬ ಸದಸ್ಯನಿಗೆ ಬಾಯಿಗೆ ಬಂದದ್ದನ್ನು ಹೇಳುವ ಚಪಲ! ಈ ಬೂಟಾಟಿಕೆಯ ನ್ಯಾಯಮಂಡಲಿಯಲ್ಲಿ ಒಲ್ಲದ ಮನಸ್ಸಿನಿಂದ ಕೂತಿರುವ ರಾಜಕುಮಾರ ನೆಕ್ಲುಡೋಫ್ ತನ್ನ ಕಾಲದ ಹೊಸ ಆಲೋಚನೆಗೆ ತಕ್ಕಂತೆ ಭೂಮಿ ಎಲ್ಲರಿಗೂ ಸೇರಿದ್ದು, ಅದು ಖಾಸಗಿ ಸ್ವತ್ತಲ್ಲ ಎಂದು ನಿರ್ಧರಿಸಿದವನು; ಸಾವಿರಾರು ಎಕರೆ ಪಿತ್ರಾರ್ಜಿತ ಭೂಮಿಯನ್ನು ರೈತರಿಗೆ ಕೊಟ್ಟಿರುವವನು.
ನ್ಯಾಯಮಂಡಳಿಯೆದುರು ಮಾಸ್ಲೋವ ಕೇಸು ಬರುತ್ತದೆ. ಕೈದಿಯ ಉಡುಪನ್ನು ಮೀರಿ ಅವಳ ಸೌಂದರ್ಯ ಎಲ್ಲ ಗಂಡಸರ ಕಣ್ಣು ಕುಕ್ಕುತ್ತಿದೆ. ನೆಕ್ಲುಡೋಫ್ ಅವಳನ್ನು ನೋಡಿದವನೇ ಬೆಚ್ಚುತ್ತಾನೆ. ತಾನು ಹರೆಯದಲ್ಲಿ ಪ್ರೇಮಿಸಿ ಕೈಬಿಟ್ಟು ಬಂದ ಕಟುಶಾಳೇ ಮಾಸ್ಲೋವ ಎಂಬ ಸತ್ಯ ಅವನ ಮುಖಕ್ಕೆ ಹೊಡೆಯುತ್ತದೆ. ಇದು ಅವನ ಜ್ಞಾನೋದಯದ ಮೊದಲ ಘಟ್ಟ. ಇನ್ನೇನು ಅವಳು ನನ್ನತ್ತ ನೋಡುತ್ತಾಳೆ; ಗುರುತಿಸುತ್ತಾಳೆ; ನಾನೀಗ ಎದ್ದು ಲೋಕಕ್ಕೆ ನಿಜವನ್ನು ಸಾರಬೇಕು ಎಂದು ನೆಕ್ಲುಡೋಫ್ ಚಡಪಡಿಸುತ್ತಾನೆ. ಆದರೆ ಆಕೆ ಅವನನ್ನು ಗಮನಿಸುವುದೇ ಇಲ್ಲ.
ಆಕೆ ನಿರಪರಾಧಿ ಎಂಬುದು ನೆಕ್ಲುಡೋಫ್‌ಗೆ ಗೊತ್ತಾಗುತ್ತದೆ. ಆಕೆಗೆ ನ್ಯಾಯ ಒದಗಿಸಲು ಪ್ರಯತ್ನ ಮಾಡುತ್ತಾನೆ. ಆದರೆ ಮನುಷ್ಯರೇ ಇಲ್ಲದ ಕೋರ್ಟಿನಲ್ಲಿ ಅವಳಿಗೆ ನಾಲ್ಕು ವರ್ಷಗಳ ಶಿಕ್ಷೆಯಾಗುತ್ತದೆ. ಸೈಬೀರಿಯಾದ ಜೈಲಿಗೆ ಅವಳನ್ನು ಕಳಿಸಲು ಇನ್ನೂ ಸಮಯವಿದೆ. ಆಗ ನೆಕ್ಲುಡೋಫ್ ಅಪೀಲು ಹೋಗಿ ಅವಳನ್ನು ಉಳಿಸಲು ಪ್ರಯತ್ನಿಸುತ್ತಾನೆ. ಜೈಲಿಗೆ ಹೋಗಿ ಮಾಸ್ಲೋವಳನ್ನು ಕಂಡು ತನ್ನ ಗುರುತು ಹೇಳುತ್ತಾನೆ; ಅವಳನ್ನು ಅಲ್ಲಿಂದ ಬಿಡಿಸಿ, ಮದುವೆಯಾಗುವುದಾಗಿ ಹೇಳುತ್ತಾನೆ. ಅಲ್ಲಿಂದಾಚೆಗೆ ಅವನಿಗೆ ಸಮಾಜದ ವಾಸ್ತವದ ದರ್ಶನವಾಗುತ್ತದೆ:
ಜೈಲಿನಲ್ಲಿರುವ ಯಾರ ಕತೆ ಕೇಳಿದರೂ ಅವೆಲ್ಲ ಜೈಲಿನ ಹೊರಗೆ ಇರುವ ಎಲ್ಲರೂ ಮಾಡಿರುವ ಅಪರಾಧಗಳಂತೆಯೇ ನೆಕ್ಲುಡೋಫ್‌ಗೆ ಕಾಣುತ್ತವೆ: ಅವನ ಹರೆಯದ ಬೇಜವಾಬ್ದಾರಿತನಕ್ಕೆ ಬಲಿಯಾಗಿರುವ ಮಾಸ್ಲೋವ ಹೆತ್ತ ಮಗು ಆರೈಕೆಯಿಲ್ಲದೆ ತೀರಿಕೊಂಡಿದೆ. ಮಾಸ್ಲೋವ ವೇಶ್ಯೆಯಾಗಿ ಬದುಕು ನೂಕಿದ್ದಾಳೆ. ಈಗ ನ್ಯಾಯಮಂಡಳಿಯ ಅಚಾತುರ್ಯದಿಂದಾಗಿ ಶಿಕ್ಷೆಗೆ ಗುರಿಯಾಗಿದ್ದಾಳೆ. ಜೈಲನ್ನು ನೋಡುತ್ತಾ ನೋಡುತ್ತಾ ನೆಕ್ಲುಡೋಫ್‌ಗೆ ಪ್ರಭುತ್ವ, ಧರ್ಮ, ಅಧಿಕಾರಿ ವರ್ಗ, ಪೊಲೀಸ್ ವ್ಯವಸ್ಥೆ ಎಲ್ಲ ಸೇರಿ ಇಡೀ ನಾಡನ್ನೇ ಜೈಲಾಗಿರಿಸಿರುವ ಭಯಾನಕ ದೃಶ್ಯಗಳು ಕಾಣತೊಡಗುತ್ತವೆ. ಜೈಲಿನ ಹೊರಗೆ ಬದುಕುತ್ತಿರುವ ರೈತರ, ಮಹಿಳೆಯರ ಬಡತನ, ಅಸಹಾಯಕತೆಗಳು ಕೂಡ ಜೈಲಿನೊಳಗಿರುವ ನಿರ್ಗತಿಕರ ಸ್ಥಿತಿಯಂತೆಯೇ ಇರುವುದು ಹೊಳೆಯುತ್ತದೆ.
ಆ ಕಾಲಕ್ಕಾಗಲೇ ಇಂಥ ಅನ್ಯಾಯದ ವಿರುದ್ಧ ದನಿಯೆತ್ತುತ್ತಿರುವ, ಪ್ರಶ್ನೆ ಕೇಳುತ್ತಿರುವ ಲಿಬರಲ್ ಹುಡುಗ ಹುಡುಗಿಯರಿದ್ದಾರೆ; ಆದರೆ ಅವರೆಲ್ಲ ರಾಜಕೀಯ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಜೈಲಿನಲ್ಲೂ ಅವರ ಸ್ಪಿರಿಟ್ ಬತ್ತಿಲ್ಲ; ತಮ್ಮ ಹೋರಾಟ ಕುರಿತ ವಿಷಾದವಿಲ್ಲ. ಖಾಸಗಿ ಸ್ವತ್ತನ್ನು ಬಿಟ್ಟುಕೊಟ್ಟಿರುವ ನೆಕ್ಲುಡೋಫ್‌ಗೆ ವ್ಯವಸ್ಥೆಯ ಬದಲಾವಣೆಗಾಗಿ ರಾಜಕೀಯ ಹೋರಾಟ ಮಾಡುತ್ತಿರುವ ಹುಡುಗ ಹುಡುಗಿಯರ ಬಗ್ಗೆ ಸ್ಪಷ್ಟತೆಯಿಲ್ಲ. ಹೊಸ ರಾಜಕೀಯ ಮಾಡುತ್ತಿರುವವರು ಅತಿ ಮಾಡುತ್ತಿದ್ದಾರೆಂಬುದು ಅವನ ಅನುಮಾನ.
ಅಂದರೆ, ಮನುಷ್ಯ ತಾನು ಯಾವ ವರ್ಗದ ಭಾಗಿಯಾಗಿದ್ದಾನೋ ಆ ವರ್ಗದ ಧೋರಣೆಗಳು ಅವನನ್ನು ನಿಯಂತ್ರಿಸುತ್ತಲೇ ಇರುತ್ತವೆ; ಅದನ್ನು ಮೀರಲು ಅವನ ಪ್ರಜ್ಞೆಯಲ್ಲಿ ದೊಡ್ಡ ಪಲ್ಲಟವೇ ಆಗಬೇಕಾಗುತ್ತದೆ. ಇದೆಲ್ಲ ಟಾಲ್‌ಸ್ಟಾಯ್ ಹಾದು ಬಂದ ಸ್ಥಿತಿಯೂ ಹೌದು. ಈ ಕಾದಂಬರಿ ಬರೆದಾಗ ಎಪ್ಪತ್ತು ತಲುಪಿದ್ದ ಭಾರೀ ಜಮೀನ್ದಾರ ಟಾಲ್‌ಸ್ಟಾಯ್ ತನ್ನ ಸಾವಿರಾರು ಎಕರೆ ಜಮೀನನ್ನು ತ್ಯಜಿಸಲು ಹೊರಟು ತನ್ನ ಕುಟುಂಬದಲ್ಲೇ ವಿರೋಧ ಕಟ್ಟಿಕೊಂಡವನು. ಬೀಸುತ್ತಿರುವ ಕಮ್ಯುನಿಸಮ್ಮಿನ ಗಾಳಿಯ ಬಗ್ಗೆ ಟಾಲ್‌ಸ್ಟಾಯ್‌ಗೂ ಅನುಮಾನ, ಆತಂಕಗಳಿವೆ. ಆದರೆ ಭೂಮಿಯ ಬಗ್ಗೆ, ಖಾಸಗಿ ಸ್ವತ್ತಿನ ಬಗ್ಗೆ ಕಮ್ಯುನಿಸ್ಟರು ಎತ್ತುತ್ತಿರುವ ಪ್ರಶ್ನೆಗಳು ಅವನ ಒಳಗಿನಿಂದಲೂ ಮೂಡಿವೆ.
ಆ ಘಟ್ಟದ ಭೂಮಾಲಕರು, ಶ್ರೀಮಂತರು, ರಾಜಪ್ರಭುತ್ವ, ಕಮ್ಯುನಿಸಂ... ಇವೆಲ್ಲದರ ನಡುವೆ ನಿಂತಿರುವ ಟಾಲ್‌ಸ್ಟಾಯ್ ಕಾದಂಬರಿಯ ನೆಕ್ಲುಡೋಫ್ ಕೂಡ ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಮಾರ್ಕ್ಸ್‌ವಾದದ ಮೂಲ ಸಂದೇಶವನ್ನು ಅರ್ಥ ಮಾಡಿಕೊಳ್ಳದಿದ್ದರೂ, ಸಾವಿರಾರು ಎಕರೆಗಳ ಮೋಹ ತೊರೆದಿರುವ ಅವನಿಗೆ ರಾಜಕೀಯ ಪ್ರಶ್ನೆಗಳೂ, ಹೊಸ ನ್ಯಾಯದ ಪ್ರಶ್ನೆಗಳೂ ನಿಧಾನಕ್ಕೆ ಅರ್ಥವಾಗತೊಡಗುತ್ತವೆ. ಧರ್ಮ, ಪ್ರಭುತ್ವ, ಅಧಿಕಾರಿ ವರ್ಗ, ಪೊಲೀಸ್ ವ್ಯವಸ್ಥೆ ಎಲ್ಲವೂ ಸೇರಿ ತಮ್ಮ ವರ್ಗಗಳ ಹಿತರಕ್ಷಣೆಗಾಗಿ ಸಮಾಜವನ್ನೇ ಜೈಲಾಗಿ ಪರಿವರ್ತಿಸಿರುವುದನ್ನು ನೆಕ್ಲುಡೋಫ್ ನೋಡುತ್ತಾನೆ. ನಿಜಕ್ಕೂ ಜೈಲಿನಲ್ಲಿರಬೇಕಾದವರು ಜೈಲಿನ ಹೊರಗಿದ್ದಾರೆ ಎನ್ನಿಸುತ್ತದೆ.
ಮಾಸ್ಲೋವಳನ್ನು ಬಿಡಿಸುವ ಅವನ ಪ್ರಯತ್ನ ಕೈಗೂಡುವುದಿಲ್ಲ. ಶಿಕ್ಷೆಯ ಅವಧಿ ಮುಗಿಸಲು ಆಕೆ ಸೈಬೀರಿಯಾಕ್ಕೆ ಹೊರಡುವ ಕಾಲ ಬರುತ್ತದೆ. ತಾನೂ ಸೈಬೀರಿಯಾಕ್ಕೆ ಹೋಗಿ, ಅವಳ ಜೈಲು ಶಿಕ್ಷೆ ಮುಗಿಯುವವರೆಗೂ ಅಲ್ಲೇ ಹೊರಗೆ ಇದ್ದು, ನಂತರ ಅವಳನ್ನು ಮದುವೆಯಾಗುವೆನೆಂದು ನೆಕ್ಲುಡೋಫ್ ಕೈದಿಗಳ ಜೊತೆಗೇ ಸೈಬೀರಿಯಾಕ್ಕೆ ಹೊರಡುತ್ತಾನೆ; ಆ ಕೈದಿಗಳನ್ನು ನೋಡುತ್ತಾ, ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದ ವ್ಯವಸ್ಥೆ ಸುಮ್ಮನೆ ಜನರಿಗೆ ಶಿಕ್ಷೆ ಕೊಡುತ್ತಿರುವ ಧೂರ್ತತನ ಅವನ ಕಣ್ಣಿಗೆ ರಾಚತೊಡಗುತ್ತದೆ. ಕೊನೆಗೆ ಅಪೀಲೊಂದರಲ್ಲಿ ಮಾಸ್ಲೋವಾಗೆ ಬಿಡುಗಡೆ ಸಿಕ್ಕರೂ ಅವಳು ಬಿಡುಗಡೆಗೆ ಒಪ್ಪದೆ ಜೈಲಿನಲ್ಲೇ ಉಳಿಯುತ್ತಾಳೆ. ಕಾರಣ, ರಾಜಕೀಯ ಹೋರಾಟದಲ್ಲಿ ಭಾಗಿಯಾಗಿ ಸೈಬೀರಿಯಾ ಜೈಲಿಗೆ ಹೊರಟಿರುವ ಹೊಸ ಕಾಲದ ಕ್ರಾಂತಿಕಾರಿಯೊಬ್ಬ ಮಾಸ್ಲೋವಳನ್ನು ಪ್ರೀತಿಸತೊಡಗಿದ್ದಾನೆ. ಶಿಕ್ಷೆಯ ಅವಧಿಯ ನಂತರ ಅವನನ್ನೇ ಮದುವೆಯಾಗಲು ನಿರ್ಧರಿಸಿರುವ ಮಾಸ್ಲೋವ ನೆಕ್ಲುಡೋಫ್‌ನನ್ನು ಬೀಳ್ಕೊಡುತ್ತಾಳೆ.
ಬದುಕಿನ ಎಲ್ಲ ಸುಖ, ಸವಲತ್ತುಗಳನ್ನು ಅನುಭವಿಸಿ ನಂತರ ಕಷ್ಟ, ನಿರಾಶೆಗಳನ್ನು ಹಾದು ಹೋಗುವ ನೆಕ್ಲುಡೋಫ್ ಮೂಲಕ ಟಾಲ್‌ಸ್ಟಾಯ್ ರಶ್ಯನ್ ಬುದ್ಧನೊಬ್ಬನನ್ನು ಸೃಷ್ಟಿಸುತ್ತಾನೆ.
ನೂರಿಪ್ಪತ್ತೈದು ವರ್ಷಗಳ ಕೆಳಗೆ ಬಂದ ‘ರೆಸರೆಕ್ಷನ್’ ಬಗ್ಗೆ ಮತ್ತೆ ಬರೆಯಲು ಕಾರಣವಿದೆ. ಇದು ಕ್ರಾಂತಿಯ ಮುಂಚಿನ ದಶಕಗಳ ರಶ್ಯದ ಕತೆ. ಒಂದು ಕಾಲವನ್ನು ಪ್ರಾಮಾಣಿಕವಾಗಿ, ನಿಷ್ಠುರವಾಗಿ ನೋಡುವ ಲೇಖಕ ಎಲ್ಲ ಕಾಲಕ್ಕೂ ಕನ್ನಡಿಯಾಗುತ್ತಾನೆ. ಸ್ವಂತದ ಸುಳ್ಳುಗಳನ್ನು ಸೀಳಿ, ತನ್ನ ವ್ಯಕ್ತಿತ್ವವನ್ನೇ ತೀವ್ರ ಪರೀಕ್ಷೆಗೆ ಒಳಪಡಿಸಿ, ತನ್ನ ಚರ್ಮದಿಂದ ಆಚೆ ಬಂದು ಲೋಕವನ್ನು ಅರಿತ ಟಾಲ್‌ಸ್ಟಾಯ್ ತನ್ನ ಕಾಲದ ಸಂದಿಗ್ಧ, ನಿಯಂತ್ರಣ, ದಮನಗಳನ್ನು ಹೇಳಿದವನು. ಅವನ ದರ್ಶನಕ್ಕೆ ದಕ್ಕಿದ ಸತ್ಯಗಳ ಲೋಕ ಇದು.
‘ಟಾಲ್‌ಸ್ಟಾಯ್... ರಶ್ಯನ್ ಕ್ರಾಂತಿಯ ಕನ್ನಡಿ’ ಎಂದು ಮುಂದೊಮ್ಮೆ ಲೆನಿನ್ ಬಣ್ಣಿಸಿದ. ಕಾಲ ಉರುಳಿದಂತೆ ಟಾಲ್‌ಸ್ಟಾಯ್ ಕನ್ನಡಿ ಕಮ್ಯುನಿಸ್ಟ್ ಆಳ್ವಿಕೆ ಸೇರಿದಂತೆ ಎಲ್ಲ ಬಗೆಯ ಆಳ್ವಿಕೆಗಳ ಕ್ರೌರ್ಯವನ್ನೂ ಪ್ರತಿಫಲಿಸುತ್ತಿದೆ. ಕಮ್ಯುನಿಸ್ಟ್ ದೇಶಗಳಾದ ಚೀನಾ, ರಶ್ಯ, ಕ್ಯೂಬಾ; ಪ್ರಜಾಪ್ರಭುತ್ವವಾದಿ ರಾಷ್ಟ್ರಗಳೆನ್ನಲಾದ ಭಾರತ, ಅಮೆರಿಕ, ಇಸ್ರೇಲ್, ನೈಜೀರಿಯ...ಎಲ್ಲ ಕಡೆ ದೇಶವನ್ನೇ ಜೈಲಾಗಿಸುವ ಕ್ರೂರ ಪ್ರಭುತ್ವಗಳಿವೆ. ಶೇಕ್ಸ್‌ಪಿಯರ್ ಬಿಟ್ಟರೆ ಜಗತ್ತಿನ ಅತ್ಯಂತ ಶ್ರೇಷ್ಠ ಲೇಖಕ ಎನ್ನಲಾದ ಟಾಲ್‌ಸ್ಟಾಯ್ ಕನ್ನಡಿಯಲ್ಲಿ ಎಲ್ಲ ದೇಶಗಳ ಜನರೂ, ರಾಜಕಾರಣಿಗಳೂ ತಂತಮ್ಮ ದೇಶಗಳ ಮುಖಗಳನ್ನು ನೋಡಿಕೊಳ್ಳಬೇಕು; ಆಗಲಾದರೂ ಅವರ ಕಣ್ಣು ಅಷ್ಟಿಷ್ಟಾದರೂ ತೆರೆಯಬಲ್ಲದು.