ಗಲ್ಫ್ ಕರ್ನಾಟಕೋತ್ಸವ: ಉದ್ಯಮಿ ಮನ್ಸೂರ್ ಹೆಜಮಾಡಿ, ಹಿದಾಯತ್ ಅಡ್ಡೂರ್ ಗೆ ‘ಗಲ್ಫ್ ಕರ್ನಾಟಕ ರತ್ನ’ ಪ್ರಶಸ್ತಿ
ದುಬೈ: ಇಲ್ಲಿನ ಗ್ರ್ಯಾಂಡ್ ಹಯಾತ್ ಹೋಟೆಲ್ ನಲ್ಲಿ ನಡೆದ ಪ್ರಥಮ ಗಲ್ಫ್ ಕರ್ನಾಟಕೋತ್ಸವ ಸಮಾರಂಭದಲ್ಲಿ ಬಹ್ರೈನ್ ಉದ್ಯಮಿ, ಸಾರಾ ಗ್ರೂಪ್ ಚೇರ್ಮನ್ ಮಹಮ್ಮದ್ ಮನ್ಸೂರ್ ಹೆಜಮಾಡಿ ಹಾಗೂ ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಶನ್ ಸ್ಥಾಪಕ ಹಿದಾಯತ್ ಅಡ್ಡೂರ್ 'ಗಲ್ಫ್ ಕರ್ನಾಟಕ ರತ್ನ' ಗೌರವಕ್ಕೆ ಭಾಜನರಾಗಿದ್ದಾರೆ.
ಬನಿಯಾಸ್ ಬಾಲ್ ರೂಂನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಾವಿರಾರು ಅನಿವಾಸಿ ಕನ್ನಡಿಗರ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ದುಬೈ ರಾಜ ಕುಟುಂಬದ ಸದಸ್ಯ ಹಾಗೂ ಎಂಬಿಎಂ ಸಮೂಹದ ಅಧ್ಯಕ್ಷ ಶೇಖ್ ಮುಹಮ್ಮದ್ ಮಖ್ತೂಮ್ ಜುಮಾ ಅಲ್ ಮಖ್ತೂಮ್ ಅವರು "ಗಲ್ಫ್ ಕರ್ನಾಟಕ ರತ್ನ 2023" ಪ್ರಶಸ್ತಿ ನೀಡಿದರು.
ಕಳೆದ ಮೂರು ದಶಕಗಳಿಂದ ಬಹ್ರೈನ್ ನಲ್ಲಿ ಯಶಸ್ವಿ ಉದ್ಯಮಿಯಾಗಿರುವ, ವರ್ಲ್ಡ್ ಯೂತ್ ಗ್ರೂಪ್ ನಿರ್ದೇಶಕ , ಬಹ್ರೈನ್ ಕ್ರಿಕೆಟ್ ಬೋರ್ಡ್ ಸಲಹಾ ಸಮಿತಿಯ ಚೇರ್ಮನ್, ಅನಿವಾಸಿ ಕನ್ನಡಿಗ ಮಹಮ್ಮದ್ ಮನ್ಸೂರ್ ಹೆಜಮಾಡಿ ಅವರಿಗೆ ಉದ್ಯಮ ಕ್ಷೇತ್ರದ ಸಾಧನೆಗಾಗಿ "ಗಲ್ಫ್ ಕರ್ನಾಟಕ ರತ್ನ 2023" ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯುಎಇಯಲ್ಲಿ ದಶಕಗಳಿಂದ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅನಿವಾಸಿ ಯುವ ಉದ್ಯಮಿ ಹಿದಾಯತ್ ಅಡ್ಡೂರ್ ಅವರು ಹಿದಾಯ ಫೌಂಡೇಶನ್, ಕನ್ನಡಿಗಾಸ್ ಹೆಲ್ಪ್ ಲೈನ್, ಅಂತಾರಾಷ್ಟ್ರೀಯ ಕನ್ನಡಿಗರ ಒಕ್ಕೂಟದ ಮೂಲಕ ನಡೆಸಿದ ಸೇವೆಯನ್ನು ಗುರುತಿಸಿ ‘ಗಲ್ಫ್ ಕರ್ನಾಟಕ ರತ್ನ 2023’ ಪ್ರಶಸ್ತಿ ಪಡೆದರು.
ಹಿರಿಯ ಅನಿವಾಸಿ ಉದ್ಯಮಿಗಳಾದ ತುಂಬೆ ಗ್ರೂಪ್ ಅಧ್ಯಕ್ಷ ಮೊಹಿದ್ದೀನ್ ತುಂಬೆ, ಹಿದಾಯತ್ ಗ್ರೂಪ್ ಅಧ್ಯಕ್ಷ ಹಿದಾಯತುಲ್ಲಾ ಅಬ್ಬಾಸ್, ಬ್ಯಾರೀಸ್ ಕಲ್ಚರಲ್ ಫಾರಂನ ಬಿ.ಕೆ ಯೂಸುಫ್ ಹಾಗೂ ಹಿರಿಯ ಉದ್ಯಮಿ ಎಸ್.ಎಂ ಸೈಯದ್ ಖಲೀಲ್ ಅವರೂ ಗಲ್ಫ್ ಕರ್ನಾಟಕ ರತ್ನ ಗೌರವ ಪ್ರಶಸ್ತಿ ಸ್ವೀಕರಿಸಿದರು.