ದುಬೈಯ ಭಾರೀ ಮಳೆಗೆ ಮೋಡ ಬಿತ್ತನೆ ಕಾರಣವಲ್ಲ: ವರದಿ

Update: 2024-04-19 16:47 GMT

PC : x

ದುಬೈ: ದುಬೈಯಲ್ಲಿ ಸೋಮವಾರ ಮತ್ತು ಮಂಗಳವಾರ ಸುರಿದ ದಾಖಲೆ ಪ್ರಮಾಣದ ಮಳೆ ಹಾಗೂ ಪ್ರವಾಹಕ್ಕೆ ಮೋಡ ಬಿತ್ತನೆ ಕಾರಣವಲ್ಲ. ಹವಾಮಾನ ಬದಲಾವಣೆ ಸಮಸ್ಯೆ ಕಾರಣ ಎಂದು ಹವಾಮಾನ ವಿಜ್ಞಾನಿಗಳ ವರದಿ ಹೇಳಿದೆ.

ವಿಶ್ವದ ಅತ್ಯಾಧುನಿಕ ನಗರದಲ್ಲಿ ಕಳೆದ 7 ದಶಕಗಳಲ್ಲೇ ದಾಖಲೆ ಮಟ್ಟದಲ್ಲಿ ಸುರಿದ ಮಳೆಯ ತೀವ್ರತೆಗೆ ಮೋಡ ಬಿತ್ತನೆ ಕಾರಣವಾಗಿರಬಹುದು ಎಂಬ ಊಹೆಯನ್ನು ಹುಟ್ಟುಹಾಕಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಲಂಡನ್‍ನ ಇಂಪೀರಿಯಲ್ ಕಾಲೇಜಿನ ಹಿರಿಯ ಉಪನ್ಯಾಸಲಿ ಫ್ರೆಡೆರಿಕ್ ಒಟ್ಟೊ `ದುಬೈಯಲ್ಲಿ ಸುರಿದ ದಾಖಲೆ ಮಳೆಗೆ ಮೋಡ ಬಿತ್ತನೆ ಕಾರಣವಲ್ಲ. ಹವಾಮಾನ ಬದಲಾವಣೆ ಸಮಸ್ಯೆಯೇ ಕಾರಣ' ಎಂದು ದೃಢಪಡಿಸಿದ್ದಾರೆ. ಬೆಚ್ಚನೆಯ ವಾತಾವರಣವು ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವದರಿಂದ ಜಾಗತಿಕವಾಗಿ ವಿಪರೀತ ಮಳೆ ಹೆಚ್ಚುತ್ತಿದೆ. ವಾತಾವರಣದಲ್ಲಿ ತೇವಾಂಶವಿದ್ದರೆ ಮಾತ್ರ ಮೋಡಬಿತ್ತನೆ ಸಾಧ್ಯ. ತೇವಾಂಶವಿದ್ದರೆ ಮಾತ್ರ ಮೋಡವಿರುತ್ತದೆ. ಮಾನವರು ತೈಲ, ಅನಿಲ ಮತ್ತು ಕಲ್ಲಿದ್ದಲನ್ನು ಸುಡುವುದನ್ನು ಮುಂದುವರಿಸಿದರೆ ಹವಾಮಾನವು ಬೆಚ್ಚಗಾಗುತ್ತದೆ. ತೀವ್ರ ಮಳೆ ಮತ್ತು ಪ್ರವಾಹದ ಸಮಸ್ಯೆ ಎದುರಾಗುತ್ತದೆ ಎಂದವರು ಹೇಳಿದ್ದಾರೆ.

ದುಬೈ ಮಳೆಯು ಹವಾಮಾನ ಬದಲಾವಣೆಗೆ ಸ್ಪಷ್ಟ ಸಂಕೇತವಾಗಿದೆ. ತಾಪಮಾನ ಏರಿಕೆಯ ಸಂದರ್ಭ ಮಳೆಯಾದರೆ ಭರ್ಜರಿಯಾಗಿ ಸುರಿಯುತ್ತದೆ ಎಂದು ಪರಿಸರ ವಿಜ್ಞಾನಿ ಎಂ. ರಾಜೀವನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News