ಬಾರ್ಡರ್-ಗವಾಸ್ಕರ್ ಟ್ರೋಫಿಗಿಂತ ಮೊದಲು ಫಾರ್ಮ್ ಗೆ ಮರಳಿದ ರವೀಂದ್ರ ಜಡೇಜ

Update: 2024-11-04 16:05 GMT

ರವೀಂದ್ರ ಜಡೇಜ | PC : X 

ಹೊಸದಿಲ್ಲಿ : ಆಸ್ಟ್ರೇಲಿಯದ ವಿರುದ್ಧ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಆರಂಭವಾಗುವ ಸಮಯಕ್ಕೆ ಸರಿಯಾಗಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ವಿಕೆಟ್ ಪಡೆಯುವ ಹಾದಿಗೆ ಮರಳಿದ್ದಾರೆ. ಭಾರತದ ಆಲ್ರೌಂಡರ್ ನ್ಯೂಝಿಲ್ಯಾಂಡ್ ವಿರುದ್ಧದ ಮುಂಬೈ ಟೆಸ್ಟ್ನಲ್ಲಿ 10 ವಿಕೆಟ್ ಗೊಂಚಲು ಪಡೆದು ತನ್ನ ಮೊದಲಿನ ಲಯ ಕಂಡುಕೊಂಡಿದ್ದಾರೆ. ಬೌಲಿಂಗ್ನಲ್ಲಿ ವೈಫಲ್ಯ ಕಂಡಿರುವ ಭಾರತ ತಂಡಕ್ಕೆ ಇದು ಸಮಾಧಾನಕರ ವಿಚಾರವಾಗಿದೆ.

ನವೆಂಬರ್ 22ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಜಡೇಜ ಅವರು ಇದೇ ಫಾರ್ಮ್ ಮುಂದುವರಿಸುತ್ತಾರೆಯೇ ಎಂಬ ಪ್ರಶ್ನೆ ಉದ್ಬವಿಸಿದೆ.

ಭಾರತ ತಂಡವು ಕಿವೀಸ್ ವಿರುದ್ಧ ಸರಣಿಯಲ್ಲಿ ಮುಖಭಂಗ ಅನುಭವಿಸಿದ್ದರೂ ಜಡೇಜರ ಪ್ರದರ್ಶನವು ಭಾರತಕ್ಕೆ ಸ್ವಲ್ಪಮಟ್ಟಿನ ಆಶಾವಾದ ಮೂಡಿಸಿದೆ. ಮುಂಬೈ ಟೆಸ್ಟ್ಗಿಂತ ಮೊದಲು ಜಡೇಜ ಅವರು ಈ ವರ್ಷ ಬೌಲಿಂಗ್ನಲ್ಲಿ ಹೆಚ್ಚು ಮಿಂಚಿರಲಿಲ್ಲ. ರಾಜ್ ಕೋಟ್ ನಲ್ಲಿ ಇಂಗ್ಲೆಂಡ್ ವಿರುದ್ಧ್ದ ಮಾತ್ರ 5 ವಿಕೆಟ್ ಗೊಂಚಲು(5-41) ಪಡೆದಿದ್ದರು. ಮುಂಬೈ ಟೆಸ್ಟ್ಗಿಂತ ಮೊದಲು ಜಡೇಜ ಹಿಂದಿನ 26 ಇನಿಂಗ್ಸ್ಗಳಲ್ಲಿ ಕೇವಲ ಒಂದು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದರು.

ನ್ಯೂಝಿಲ್ಯಾಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಜಡೇಜ ಒಂದೂ ವಿಕೆಟ್ ಪಡೆದಿರಲಿಲ್ಲ. ಆದರೆ ಮುಂಬೈ ಟೆಸ್ಟ್ನಲ್ಲಿ ಎರಡು ಇನಿಂಗ್ಸ್ಗಳಲ್ಲಿ 65 ರನ್ಗೆ 5 ಹಾಗೂ 55 ರನ್ಗೆ 5 ವಿಕೆಟ್ ಗೊಂಚಲು ಕಬಳಿಸಿದ್ದರು. ಈ ಅಮೋಘ ಪ್ರದರ್ಶನದ ಮೂಲಕ ಜಡೇಜ ಈ ವರ್ಷ 18 ಇನಿಂಗ್ಸ್ಗಳಲ್ಲಿ 3 ಐದು ವಿಕೆಟ್ ಗೊಂಚಲು ಸಹಿತ ಒಟ್ಟು 44 ವಿಕೆಟ್ಗಳನ್ನು ಪಡೆದಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಗೆ ದಿನಗಣನೆ ಆರಂಭವಾಗಿರುವಾಗಲೇ ಜಡೇಜ ಫಾರ್ಮ್ಗೆ ಮರಳಿದ್ದಾರೆ. ಭಾರತದ ಅವಕಾಶಗಳಿಗೆ ಜಡೇಜರ ಫಾರ್ಮ್ ನಿರ್ಣಾಯಕವಾಗಿದೆ. ಜಡೇಜ, ಕಿವೀಸ್ ವಿರುದ್ಧ ತನ್ನ ಬೌಲಿಂಗ್ ಮಾತ್ರವಲ್ಲ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕವೂ ಅಮೂಲ್ಯ ಕೊಡುಗೆ ನೀಡಿ ಗಮನ ಸೆಳೆದಿದ್ದರು.

ಜಡೇಜ 2024ರಲ್ಲಿ 28.73ರ ಸರಾಸರಿಯಲ್ಲಿ ಒಟ್ಟು 431 ರನ್ ಗಳಿಸಿದ್ದರು. ಈ ವರ್ಷ ಶತಕ ಹಾಗೂ ಎರಡು ಅರ್ಧಶತಕಗಳನ್ನು ಗಳಿಸಿದ್ದು, ಈ ಮೂಲಕ ತಂಡಕ್ಕೆ ತನ್ನ ಆಲ್ರೌಂಡ್ ಕೊಡುಗೆ ನೀಡಿದ್ದರು.

ಭಾರತ ತಂಡವು ಆಸ್ಟ್ರೇಲಿಯದ ಸವಾಲಿಗೆ ಸಜ್ಜಾಗುತ್ತಿರುವಾಗ ಎಲ್ಲರ ಕಣ್ಣು ಜಡೇಜರ ಮೇಲಿದೆ. ಒಂದು ವೇಳೆ ಅವರು ಮುಂಬೈ ಟೆಸ್ಟ್ ಮ್ಯಾಜಿಕ್ನ್ನು ಪುನರಾವರ್ತಿಸಿದರೆ ಭಾರತ ತಂಡ ಹೆಚ್ಚು ಲಾಭ ಪಡೆಯಬಹುದು. ಭಾರತವು ಆಸ್ಟ್ರೇಲಿಯದಲ್ಲಿ ಸರಣಿಯನ್ನು ಜಯಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ತನ್ನ ಸ್ಥಾನ ಗಿಟ್ಟಿಸಲು ಎದುರು ನೋಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News