ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅಸ್ವಸ್ಥ; ಐಸಿಯುನಲ್ಲಿ ಚಿಕಿತ್ಸೆ

Update: 2024-01-30 13:22 GMT

ಮಯಾಂಕ್ ಅಗರ್ವಾಲ್ | Photo : x/@hemantbhavsar86

ಅಗರ್ತಲಾ : ಪ್ರಸಕ್ತ ಋತುವಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಅವರು ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ತ್ರಿಪುರ ತಂಡವನ್ನು ಎದುರಿಸಿದ್ದ ಕರ್ನಾಟಕ ತಂಡದ ಭಾಗವಾಗಿದ್ದರು. ಅಸ್ವಸ್ಥರಾದ ಕೂಡಲೇ ಮಯಾಂಕ್ ಅಗರ್ವಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗರ್ತಲಾದ ಎ ಎಲ್ ಎಸ್ ಆಸ್ಪತ್ರೆಗೆ ಮಯಾಂಕ್‌ ಅವರನ್ನು ದಾಖಲು ಮಾಡಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ತ್ರಿಪುರ ವಿರುದ್ಧ ರಣಜಿ ಪಂದ್ಯವನ್ನಾಡಿದ್ದ ಕರ್ನಾಟಕ ತಂಡವು, ಮುಂದಿನ ಪಂದ್ಯವನ್ನು ಫೆಬ್ರವರಿ 2ರಿಂದ ರೈಲ್ವೇ ವಿರುದ್ಧ ಗುಜರಾತ್‌ನ ಸೂರತ್ನಲ್ಲಿ ಆಡಬೇಕಿತ್ತು. ಈ ಪಂದ್ಯಕ್ಕಾಗಿ ಕರ್ನಾಟಕ ತಂಡದ ಆಟಗಾರರು ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ವಿಮಾನದಲ್ಲಿ ನೀರು ಕುಡಿದ ಮಯಾಂಕ್ ಅಗರ್ವಾಲ್ ಅವರು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

ಮಯಾಂಕ್ ಅಗರ್ವಾಲ್ ತಮ್ಮ ವಿಮಾನದ ಸೀಟಿನ ಮುಂಭಾಗದಲ್ಲಿದ್ದ ನೀರು ಕುಡಿದಿದ್ದರು. ಕೂಡಲೇ ಅವರ ನಾಲಿಗೆ, ಬಾಯಿ, ಕೆನ್ನೆ ಸುಟ್ಟು ಹೋದ ಅನುಭವವಾಗಿದೆ. ಮಾತಾಡಲು ಸಾಧ್ಯವಾಗದೆ ಮಯಾಂಕ್ ಅಗರ್ವಾಲ್ ಸೀಟಿನಲ್ಲೇ ಒರಗಿ ಬಿದ್ದಿದ್ದರು ಎಂದು ತಿಳಿದು ಬಂದಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News