ಡಾ. ತುಂಬೆ ಮೊಯ್ದಿನ್ ಅವರಿಗೆ ಪ್ರತಿಷ್ಠಿತ ‘ಗಲ್ಫ್‌ ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

Update: 2023-09-11 12:08 GMT

ದುಬೈ: ತುಂಬೆ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯ್ದಿನ್ ಅವರಿಗೆ ಪ್ರತಿಷ್ಠಿತ 'ಗಲ್ಫ್‌ ಕರ್ನಾಟಕ ರತ್ನ' ಪ್ರಶಸ್ತಿಯನ್ನು ರವಿವಾರ ದುಬೈನ ಗ್ರ್ಯಾಂಡ್‌ ಹಯಾತ್ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ದುಬೈ ರಾಜಮನೆತನದ ಸದಸ್ಯರೂ ಎಂಬಿಎಂ ಸಮೂಹದ ಅಧ್ಯಕ್ಷರೂ ಆಗಿರುವ ಶೇಖ್ ಮುಹಮ್ಮದ್ ಮಖ್ತೂಮ್ ಜುಮಾ ಅಲ್ ಮಖ್ತೂಮ್ ಅವರು ಪ್ರಶಸ್ತಿಯನ್ನು ನೀಡಿ ಡಾ ತುಂಬೆ ಮೊಯ್ದೀನ್‌ ಅವರನ್ನು ಗೌರವಿಸಿದರು. ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ ಡಾ. ತುಂಬೆ ಮೊಯ್ದಿನ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಭಾರತದ ಹೊರಗಿನ ಅತ್ಯಂತ ದೊಡ್ಡ ಖಾಸಗಿ ವೈದ್ಯಕೀಯ ವಿಶ್ವ ವಿದ್ಯಾಲಯದ ಒಡೆತನ ಹೊಂದಿದ ಜಗತ್ತಿನ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೆ ಡಾ. ತುಂಬೆ ಮೊಯ್ದಿನ್ ಪಾತ್ರರಾಗಿದ್ದಾರೆ.

ಈ ಸಮಾರಂಭದಲ್ಲಿ 20 ಇತರ ಉನ್ನತ ಉದ್ಯಮಿಗಳಿಗೂ ಅವರವರ ಕ್ಷೇತ್ರಗಳಲ್ಲಿ ಅವರು ನೀಡಿದ ಗಣನೀಯ ಕೊಡುಗೆಗಳನ್ನು ಪರಿಗಣಿಸಿ ಗೌರವಿಸಲಾಗಿದೆ.

ಗಲ್ಫ್‌ ಪ್ರಾಂತ್ಯದಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಮೂಲದ ಉದ್ಯಮಿಗಳನ್ನು ಗುರುತಿಸಿ ಗೌರವಿಸಲು ಗಲ್ಫ್‌ ಕರ್ನಾಟಕೋತ್ಸವವನ್ನು ಆಚರಿಸಲಾಗುತ್ತದೆ.

ಡಾ. ತುಂಬೆ ಮೊಯ್ದಿನ್ ಅವರು 1997ರಲ್ಲಿ ತುಂಬೆ ಗ್ರೂಪ್‌ ಸ್ಥಾಪಿಸಿದ್ದರು. ಖಾಸಗಿ ವೈದ್ಯಕೀಯ ಕಾಲೇಜು ಆಗಿ ಆರಂಭಗೊಂಡ ಸಂಸ್ಥೆ ಇಂದು ಗಲ್ಫ್‌ ಮೆಡಿಕಲ್‌ ಯುನಿವರ್ಸಿಟಿಯಾಗಿ ಜಾಗತಿಕವಾಗಿ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಕ್ಷೇತ್ರಗಳಲ್ಲಿ ಅಪಾರ ಮನ್ನಣೆ ಪಡೆದುಕೊಂಡಿದೆ. ತುಂಬೆ ಗ್ರೂಪ್‌, ಏಳು ಎಮಿರೇಟ್‌ಗಳಾದ್ಯಂತ 110 ಸ್ಥಳಗಳಲ್ಲಿ 70ಕ್ಕೂ ಅಧಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಗಲ್ಫ್‌ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಕುರಿತು ಮಾತನಾಡಿದ ಡಾ ತುಂಬೆ ಮೊಯ್ದೀನ್‌, “ಈ ಪ್ರಶಸ್ತಿ ಇನ್ನಷ್ಟು ಸಾಧನೆ ಮಾಡಲು ನನಗೆ ಸ್ಫೂರ್ತಿ ನೀಡಲಿದೆ,” ಎಂದು ಹೇಳಿದರಲ್ಲದೆ ದೇವರ ಅನುಗ್ರಹ, ಸರಕಾರ ಮತ್ತು ತಮ್ಮ ತಂಡದ ಸಹಕಾರವನ್ನು ಸ್ಮರಿಸಿದರು.


 



Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News