ಮ್ಯಾಂಚೆಸ್ಟರ್ ಗೆ ತೆರಳುತ್ತಿದ್ದ ʼಗಲ್ಫ್ ಏರ್ʼ ವಿಮಾನ ಕುವೈಟ್ ನಲ್ಲಿ ತುರ್ತು ಭೂಸ್ಪರ್ಶ; ಸಂಕಷ್ಟಕ್ಕೆ ಸಿಲುಕಿದ ಭಾರತೀಯ ಪ್ರಯಾಣಿಕರು
ಕುವೈತ್: ಬಹ್ರೇನ್ ನಿಂದ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ಗೆ ಹಾರುತ್ತಿದ್ದ ಗಲ್ಫ್ ಏರ್ ವಿಮಾನವನ್ನು ತಾಂತ್ರಿಕ ದೋಷದಿಂದ ಕುವೈತ್ ನಲ್ಲಿ ತುರ್ತು ತುರ್ತು ಭೂ ಸ್ಪರ್ಶ ಮಾಡಲಾಗಿದೆ. ಇದರಿಂದ ಭಾರತೀಯ ಪ್ರಯಾಣಿಕರು ಸುಮಾರು 20 ಗಂಟೆಗಳ ಕಾಲ ಕುವೈತ್ ವಿಮಾನ ನಿಲ್ದಾಣದಲ್ಲಿ ಪರದಾಡಿದ್ದಾರೆ ಎಂದು ಹೇಳಲಾಗಿದೆ.
ಗಲ್ಫ್ ಏರ್ ಜಿಎಫ್ 5 ವಿಮಾನ ಬಹ್ರೇನ್ ನಿಂದ ಡಿಸೆಂಬರ್ 1ರಂದು ಸ್ಥಳೀಯ ಕಾಲಮಾನ ಮುಂಜಾನೆ 2.5ಕ್ಕೆ ಹೊರಟಿದೆ, ಆದರೆ ವಿಮಾನವನ್ನು ಕುವೈತ್ ನಲ್ಲಿ 4:1ಕ್ಕೆ ಲ್ಯಾಂಡಿಂಗ್ ಮಾಡುವಂತೆ ಸೂಚಿಸಲಾಗಿದೆ.
ಹಲವಾರು ಗಂಟೆಗಳಿಂದ ನಾವು ವಿಮಾನ ನಿಲ್ದಾಣದಲ್ಲೇ ಸಿಕ್ಕಿಹಾಕಿಕೊಂಡಿದ್ದೇವೆ ಎಂದು ಪ್ರಯಾಣಿಕರು ದೂರಿದ ನಂತರ ಕುವೈತ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಧ್ಯಪ್ರವೇಶಿಸಿ ಪ್ರಯಾಣಿಕರ ಸಹಾಯಕ್ಕೆ ಬಂದಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕುವೈತ್ ನಲ್ಲಿನ ಭಾರತೀಯ ರಾಯಭಾರಿ ಕಚೇರಿ, ಪ್ರಯಾಣಿಕರಿಗೆ ಸಹಾಯ ಮಾಡಲು ಮತ್ತು ಏರ್ ಲೈನ್ನೊಂದಿಗೆ ಮಾತುಕತೆಗೆ ತಂಡವು ವಿಮಾನ ನಿಲ್ದಾಣವನ್ನು ತಲುಪಿದೆ, ಪ್ರಯಾಣಿಕರಿಗೆ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಗಲ್ಫ್ ಏರ್ ಫ್ಲೈಟ್ ಮ್ಯಾಂಚೆಸ್ಟರ್ಗೆ ಭಾರತೀಯ ಪ್ರಯಾಣಿಕರನ್ನು ಹೊತ್ತುಕೊಂಡು ಮತ್ತೆ ಪ್ರಯಾಣವನ್ನು ಬೆಳೆಸಿದೆ. ವಿಮಾನವು ಹೊರಡುವವರೆಗೂ ರಾಯಭಾರಿ ಕಚೇರಿ ಅಧಿಕಾರಿಗಳು ಸ್ಥಳದಲ್ಲಿದ್ದರು ಎಂದು ತಿಳಿಸಿದೆ.