ಕುವೈತ್‌ನಲ್ಲಿ ಕೇರಳ ಮೂಲದ ಉದ್ಯಮಿಗೆ ಸೇರಿದ ಕಟ್ಟಡದಲ್ಲಿ ಭೀಕರ ಬೆಂಕಿ ಅವಘಡ: 40 ಭಾರತೀಯರ ಸಹಿತ 49 ಮಂದಿ ಮೃತ್ಯು

Update: 2024-06-12 14:51 GMT

Screengrab: X/@AymanMatNews

ದುಬೈ: ದಕ್ಷಿಣ ಕುವೈತ್‌ನ ಅಹ್ಮದಿ ಗವರ್ನರೇಟ್‌ನ ಮಂಗಫ್‌ ಬ್ಲಾಕ್‌ನಲ್ಲಿ ಕಾರ್ಮಿಕರು ವಾಸಿಸುತ್ತಿದ್ದ ಆರು ಅಂತಸ್ತಿನ ಕಟ್ಟಡವೊಂದರಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 40 ಮಂದಿ ಭಾರತೀಯರ ಸಹಿತ 49 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕಟ್ಟಡದಲ್ಲಿ ಅಪಾರ ಸಂಖ್ಯೆಯ ಕಾರ್ಮಿಕರು ವಾಸಿಸುತ್ತಿದ್ದರು. ಅವರಲ್ಲಿ ಹಲವರನ್ನು ರಕ್ಷಿಸಲಾಗಿದೆಯಾದರೂ ಇನ್ನೂ ಹಲವಾರು ಮಂದಿ ದಟ್ಟ ಹೊಗೆಯ ಕಾರಣ ಉಸಿರುಗಟ್ಟಿ ಸಾವನ್ನಪ್ಪುವಂತಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ಕಟ್ಟಡಗಳಲ್ಲಿ ತೀರಾ ಹೆಚ್ಚು ಸಂಖ್ಯೆಯ ಕೆಲಸಗಾರರನ್ನು ಇರಿಸುವುದನ್ನು ವಿರೋಧಿಸಿ ಸದಾ ಎಚ್ಚರಿಕೆ ನೀಡುತ್ತಿದ್ದೆವು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತದಲ್ಲಿ ಗಾಯಗೊಂಡ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಕಿಯನ್ನು ನಂದಿಸಲಾಗಿದ್ದು ಅವಘಡಕ್ಕೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ಕಟ್ಟಡದ ಅಡುಗೆಮನೆಯಲ್ಲಿ ಕಾಣಿಸಿಕೊಂಡ ಬೆಂಕಿ ಅರೆಕ್ಷಣದಲಿ ಇಡೀ ಕಟ್ಟಡವನ್ನು ಮುಂಜಾನೆ 4.30ರ ಸುಮಾರಿಗೆ ವ್ಯಾಪಿಸಿದೆ.

ಕೆಲವರು ಕಟ್ಟಡದಿಂದ ಕೆಳಕ್ಕೆ ಜಿಗಿದು ಮೃತಪಟ್ಟಿದ್ದಾರೆನ್ನಲಾಗಿದೆ.

ಸುಮಾರು 195 ಕಾರ್ಮಿಕರು ಇಲ್ಲಿ ವಾಸಿಸುತ್ತಿದ್ದರು. ಅವರು ಕೇರಳ, ತಮಿಳುನಾಡು ಮತ್ತು ಉತ್ತರ ಭಾರತದವರೆಂದು ತಿಳಿಯಲಾಗಿದೆ. ಕೇರಳದ ಉದ್ಯಮಿ ಕೆ ಜಿ ಅಬ್ರಹಾಂ ಅವರ ಎನ್‌ಬಿಟಿಸಿ ಗ್ರೂಪ್‌ ಒಡೆತನದ ಕಟ್ಟಡ ಇದೆಂದು ತಿಳಿಯಲಾಗಿದೆ. ಎನ್‌ಬಿಟಿಸಿ ಸೂಪರ್‌ಮಾರ್ಕೆಟ್‌ ಉದ್ಯೋಗಿಗಳೂ ಇದೇ ಕಟ್ಟಡದಲ್ಲಿ ವಾಸಿಸುತ್ತಿದ್ದರೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News