ಆತಿಥೇಯ ಐರ್‌ಲ್ಯಾಂಡ್ ವಿರುದ್ಧದ ಮೊದಲ ಟಿ20; ಡಕ್‌ವರ್ತ್-ಲೂಯಿಸ್ ನಿಯಮದಂತೆ ಭಾರತಕ್ಕೆ 2 ರನ್ ಜಯ

Update: 2023-08-18 18:15 GMT

Photo : twitter \ @ICC



ಡಬ್ಲಿನ್: ಐರ್‌ಲ್ಯಾಂಡ್ ವಿರುದ್ಧದ ಟ್ವೆಂಟಿ20 ಸರಣಿಯ ಮೊದಲ ಪಂದ್ಯವನ್ನು ಭಾರತ ಶುಕ್ರವಾರ ಡಕ್‌ವರ್ತ್-ಲೂಯಿಸ್ ನಿಯಮದಂತೆ 2 ರನ್‌ಗಳಿಂದ ಗೆದ್ದಿದೆ.

ಗೆಲ್ಲಲು ಪ್ರವಾಸಿ ಭಾರತಕ್ಕೆ ಆತಿಥೇಯ ಐರ್‌ಲ್ಯಾಂಡ್ ಶುಕ್ರವಾರ 140 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು.

ಗುರಿಯನ್ನು ಬೆನ್ನತ್ತಿದ ಭಾರತ 6.5 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 47 ರನ್‌ಗಳನ್ನು ಗಳಿಸಿತು.

ಆಗ ಭಾರೀ ಮಳೆ ಸುರಿಯಲು ಆರಂಭಿಸಿತು. ಒಮ್ಮೆ ಆರಂಭವಾದ ಮಳೆ ನಿರಂತರವಾಗಿ ಮುಂದುವರಿಯಿತು. ಮಳೆ ನಿಲ್ಲುವ ಸೂಚನೆಗಳು ಕಾಣದಿದ್ದಾಗ ಡಕ್‌ವರ್ತ್-ಲೂಯಿಸ್ ನಿಯಮದಂತೆ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಯಿತು.

ಈ ನಿಯಮದಂತೆ ಭಾರತ 6.5 ಓವರ್‌ಗಳಲ್ಲಿ 46 ರನ್ ಮಾಡಬೇಕಾಗಿತ್ತು. ಭಾರತ ಆಗಲೇ 47 ರನ್‌ಗಳನ್ನು ಗಳಿಸಿತ್ತು. ಆಗ ಭಾರತವನ್ನು 2 ರನ್‌ಗಳಿಂದ ಗೆದ್ದಿದೆ ಎಂದು ಘೋಷಿಸಲಾಯಿತು.

ಭಾರತದ ಪರವಾಗಿ ಯಶಸ್ವಿ ಜೈಸ್ವಾಲ್ 23 ಎಸೆತಗಳಲ್ಲಿ 24 ರನ್ ಗಳಿಸಿದರೆ, ಋತುರಾಜ್ ಗಾಯಕ್‌ವಾಡ್ 16 ಎಸೆತಗಳಲ್ಲಿ 19 ರನ್ ಸಿಡಿಸಿ ಔಟಾಗದೆ ಉಳಿದರು. ಸಂಜು ಸ್ಯಾಮ್ಸನ್ 1 ರನ್ ಗಳಿಸಿ ಔಟಾಗದೆ ಉಳಿದರು.

ಐರ್‌ಲ್ಯಾಂಡ್‌ನ ಕ್ರೇಗ್ ಯಂಗ್ 5 ಎಸೆತಗಳಲ್ಲಿ 2 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಉರುಳಿಸಿದರು.

ಜಸ್ಪ್ರೀತ್ ಬುಮ್ರಾರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.

ಟಾಸ್ ಗೆದ್ದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಮೊದಲು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು.

ಐರ್‌ಲ್ಯಾಂಡ್ ಬಾರಿ ಮೆಕಾರ್ತಿ ಬಾರಿಸಿದ ಅರ್ಧ ಶತಕ (51)ದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 139 ರನ್‌ಗಳನ್ನು ಗಳಿಸಿತು.

ರವಿ ಬಿಷ್ಣೋಯ್ ಮತ್ತು ನಾಯಕ ಜಸ್ಪ್ರೀತ್ ಬುಮ್ರಾ ತಲಾ ಎರಡು ವಿಕೆಟ್‌ಗಳನ್ನು ಉರುಳಿಸಿ ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಿದರು.

ಐರ್‌ಲ್ಯಾಂಡ್‌ನ ಕ್ಯಾಂಫರ್ 33 ಎಸೆತಗಳಲ್ಲಿ 39 ರನ್‌ಗಳನ್ನು ಗಳಿಸಿದರೆ, ಮೆಕಾರ್ತಿ 33 ಎಸೆತಗಳಲ್ಲಿ 51 ರನ್‌ಗಳನ್ನು ಸಿಡಿಸಿ ಅಜೇಯರಾಗಿ ಉಳಿದರು.

ಈ ನಡುವೆ ಮಾರ್ಕ್ ಅಡೇರ್ 16 ಎಸೆತಗಳಲ್ಲಿ 16 ರನ್‌ಗಳನ್ನು ಮಾಡಿ ತಂಡಕ್ಕೆ ಅಮೂಲ್ಯ ದೇಣಿಗೆ ನೀಡಿದರು.

ಬುಮ್ರಾ 4 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಪಡೆದು 24 ರನ್ ನೀಡಿದರೆ, ಬಿಷ್ಣೋಯ್ 23 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಪಡೆದರು.

ಚೊಚ್ಚಲ ಅಂತರ್‌ರಾಷ್ಟ್ರೀಯ ಟಿ20 ಪಂದ್ಯವಾಡಿದ ಪ್ರಸಿದ್ಧ ಕೃಷ್ಣ 4 ಓವರ್‌ಗಳಲ್ಲಿ 32 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News