ದುಬೈ : ವೈಭವದ ಗಲ್ಫ್ ಕರ್ನಾಟಕೋತ್ಸವ 2023 ಸಂಪನ್ನ
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದ ಉದ್ಯಮಿ ಡಾ. ತುಂಬೆ ಮೊಯ್ದೀನ್, ಖ್ಯಾತ ಉದ್ಯಮಿ ಹಿದಾಯತುಲ್ಲಾ ಅಬ್ಬಾಸ್ , ನ್ಯಾಶ್ ಇಂಜಿನಿಯರಿಂಗ್ ಅಧ್ಯಕ್ಷರಾದ ನಿಸ್ಸಾರ್ ಅಹಮದ್, ಸ್ಪ್ರೇಟೆಕ್ ಕೋಟಿಂಗ್ಸ್ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರ ಹೆಗ್ಡೆ, ಐವರಿ ಗ್ರ್ಯಾಂಡ್ ರಿಯಲ್ ಎಸ್ಟೇಟ್ ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಡಿಸೋಜಾ, ಯಶಸ್ವಿ ಉದ್ಯಮಿ ಮೊಹಮ್ಮದ್ ಮೀರಾನ್ ಅವರು ಪ್ರಶ್ರಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.
ದುಬೈ : ಗಲ್ಫ್ ಪ್ರದೇಶದಲ್ಲಿನ ಕರ್ನಾಟಕ ಮೂಲದ ಉದ್ಯಮಿಗಳ ಅತ್ಯುತ್ತಮ ಕೊಡುಗೆಗಳು ಮತ್ತು ಕೆಲಸವನ್ನು ಗೌರವಿಸುವ ಉದ್ದೇಶದಿಂದ ನಡೆದ ವೈಭವದ ಕಾರ್ಯಕ್ರಮ ಗಲ್ಫ್ ಕರ್ನಾಟಕೋತ್ಸವ, ಸೆಪ್ಟೆಂಬರ್ 10, 2023 ರಂದು ಅದ್ಧೂರಿಯಾಗಿ ನಡೆಯಿತು . ಈ ಸಂದರ್ಭ ಒಟ್ಟು 21 ಪ್ರಭಾವೀ ಉದ್ಯಮಿಗಳಿಗೆ ಪ್ರತಿಷ್ಠಿತ 'ಗಲ್ಫ್ ಕರ್ನಾಟಕ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಖ್ಯಾತ ಊದ್ಯಮಿಗಳಿಗೆ ದುಬೈ ರಾಜಮನೆತನದ ಸದಸ್ಯ ಮತ್ತು MBM ಗ್ರೂಪ್ ನ ಅಧ್ಯಕ್ಷರಾದ ಶೇಖ್ ಮೊಹಮ್ಮದ್ ಮಕ್ತೂಮ್ ಜುಮಾ ಅಲ್ ಮಕ್ತೌಮ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ಮಹತ್ವದ ಕಾರ್ಯಕ್ರಮದಲ್ಲಿ ಉದ್ಯಮಿಗಳ ಸಾಧನೆಯ ಸುಂದರ ಕಾಫಿ ಟೇಬಲ್ ಪುಸ್ತಕ ಬಿಡುಗಡೆಯಾಗಿದ್ದು, ಗಲ್ಫ್ ರಾಷ್ಟ್ರಗಳು ಮತ್ತು ಉದ್ಯಮಿಗಳ ತವರೂರು ಕರ್ನಾಟಕಕ್ಕೆ ಅವರ ಸಾಧನೆಗಳು ಮತ್ತು ಸಾಧನೆಯನ್ನು ಪರಿಚಯಿಸುವ ಕೆಲಸ ಮಾಡಲಾಗಿದೆ.
ಗಲ್ಫ್ ಕರ್ನಾಟಕೋತ್ಸವ ಕಾರ್ಯಕ್ರಮ ದುಬೈನ ಗ್ರ್ಯಾಂಡ್ ಹಯಾತ್ ಹೋಟೆಲ್ನ ಸಭಾಂಗಣದಲ್ಲಿ ರವಿವಾರ ಯಶಸ್ವಿಯಾಗಿ ನಡೆಯಿತು. ಸಮಾಜದ ಎಲ್ಲಾ ವರ್ಗಗಳಿಂದ 1000 ಕ್ಕೂ ಹೆಚ್ಚು ಪ್ರೇಕ್ಷಕರು ಈ ಕ್ಷಣವನ್ನು ಕಣ್ತುಂಬಿಕೊಂಡರು. ಕಾರ್ಯಕ್ರಮದಲ್ಲಿ ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ವ್ಯಾಪಾರದ ಸವಾಲುಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ಗಲ್ಫ್ ರಾಷ್ಟ್ರಗಳು ಮತ್ತು ಕರ್ನಾಟಕ, ಇವರೆರಡರ ಆರ್ಥಿಕ ಮತ್ತು ಸಾಮಾಜಿಕ ರಚನೆಯ ಮೇಲೆ ಮಹತ್ವದ ಪ್ರಭಾವ ಬೀರಿದ ಈ ವ್ಯಕ್ತಿಗಳ ಗಮನಾರ್ಹ ಸಾಧನೆಯನ್ನು ಗುರುತಿಸಲು ಮತ್ತು ಅವರಿಂದ ಸ್ಫೂರ್ತಿ ಪಡೆಯಲು ಈ ಕಾರ್ಯಕ್ರಮ ವೇದಿಕೆಯಾಗಿ ಕಾರ್ಯನಿರ್ವಹಿಸಿತು.
ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ 21 ಮಂದಿ ಪ್ರತಿಷ್ಠಿತರನ್ನು ಸನ್ಮಾನಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಈ ಮಾದರಿ ಉದ್ಯಮಿಗಳು ತಮ್ಮ ಸಮುದಾಯಗಳ ಏಳಿಗೆಗೆ ಮತ್ತು ಕರ್ನಾಟಕದ ಸುಧಾರಣೆಗೆ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ.
ಕಾಫಿ ಟೇಬಲ್ ಪುಸ್ತಕದಲ್ಲಿ ಕಾಣಿಸಿಕೊಂಡಿರುವ ಆದರ್ಶ ಉದ್ಯಮಿಗಳ ಪಟ್ಟಿ ಮತ್ತು 'ಗಲ್ಫ್ ಕರ್ನಾಟಕ ರತ್ನ 2023' ಪ್ರಶಸ್ತಿ ಪುರಸ್ಕೃತರು:
ಡಾ. ತುಂಬೆ ಮೊಯ್ದೀನ್, ಯುಎಇಯ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಭಾರತದ ಹೊರಗೆ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಕರ್ನಾಟಕದ ಏಕೈಕ ಉದ್ಯಮಿ ಎಂಬ ಹೆಗ್ಗಳಿಕೆಯೂ ಅವರಿಗಿದೆ. ಯುಎಇಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಅವರು ನಾಯಕತ್ವ ವಹಿಸಿದ್ದಾರೆ. ಇತರ ಪ್ರಶಸ್ತಿ ಪುರಸ್ಕೃತರು: ಹಿದಾಯತ್ ಗ್ರೂಪ್ ನ ಸ್ಥಾಪಕ ಮತ್ತು ಅಧ್ಯಕ್ಷರಾದ ಹಿದಾಯತುಲ್ಲಾ ಅಬ್ಬಾಸ್, EMCO ಇಂಟರ್ನ್ಯಾಷನಲ್ ಮತ್ತು ಎಲೆಕ್ಟ್ರಿಕ್ ವೇ ಅಧ್ಯಕ್ಷರಾದ ಮೊಹಮ್ಮದ್ ಮೀರಾನ್, ರಿಲಾಯೇಬಲ್ ಗ್ರೂಪ್ ಆಫ್ ಕಂಪೆನೀಸ್ ಸ್ಥಾಪಕ ಮತ್ತು ಅಧ್ಯಕ್ಷರಾದ ಜೇಮ್ಸ್ ಮೆಂಡೋನ್ಸಾ, ನ್ಯಾಶ್ ಇಂಜಿನಿಯರಿಂಗ್ ಅಧ್ಯಕ್ಷರಾದ ನಿಸ್ಸಾರ್ ಅಹಮದ್, ಸ್ಪ್ರೇಟೆಕ್ ಕೋಟಿಂಗ್ಸ್ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರ ಹೆಗ್ಡೆ, ಮೆರಿಟ್ ಫ್ರೈಟ್ ಸಿಸ್ಟಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್ ಮಥಿಯಾಸ್, ವೀನಸ್ ಗ್ರೂಪ್ ಆಫ್ ರೆಸ್ಟೋರೆಂಟ್ ಮಾಲಕರಾದ ವಾಸುದೇವ ಭಟ್ ಪುತ್ತಿಗೆ, ಇಂಟಿಗ್ನಿಸ್ ನವೀದ್ ಕಂಪನಿಯ ಮಹಮ್ಮದ್ ನವೀದ್ ಮಾಗುಂಡಿ, ಸಾರಾ ಸಮೂಹ ಅಧ್ಯಕ್ಷರಾದ ಮನ್ಸೂರ್ ಅಹಮದ್, ಕೆ & ಕೆ ಎಂಟರ್ಪ್ರೈಸಸ್ ಸ್ಥಾಪಕ ಅಧ್ಯಕ್ಷರಾದ ಎಂ. ಸೈಯದ್ ಖಲೀಲ್, ಐವರಿ ಗ್ರ್ಯಾಂಡ್ ರಿಯಲ್ ಎಸ್ಟೇಟ್ ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಡಿಸೋಜಾ, ಗಡಿಯಾರ್ ಗ್ರೂಪ್ ಆಫ್ ಕಂಪನೀಸ್ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಪ್ಯಾಂಥಿಯಾನ್ ಡೆವಲಪ್ ಮೆಂಟ್ ಗ್ರೂಪ್ ಪ್ರಾಜೆಕ್ಟ್ಸ್ ಡೈರೆಕ್ಟರ್ ಇಬ್ರಾಹಿಂ ಗಡಿಯಾರ್, ಏರ್ ಚಟೌ ಇಂಟರ್ನ್ಯಾಷನಲ್ ಎಕ್ಸಿಕ್ಯೂಟಿವ್ ಚೇರ್ಮನ್ ಡಾ. ಬಿ.ಕೆ. ಯೂಸುಫ್, ಗ್ಲೋಬಲ್ ಟೆಕ್ ಪಾರ್ಕ್ ಸಿಇಒ ಡಾ.ಸತೀಶ್ ಪಿ ಚಂದ್ರ, ZGC ಗ್ಲೋಬಲ್ / ಝೈನ್ ಗ್ರೂಪ್ ಆಫ್ ಹೋಟೆಲ್ಸ್ ಅಧ್ಯಕ್ಷ ಮತ್ತು ಸಂಸ್ಥಾಪಕ ಜಫ್ರುಲ್ಲಾ ಖಾನ್ ಮಂಡ್ಯ, ಯುಎಇಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಚಾನ್ಸಲರ್ ಜನರಲ್ ಹಾಗೂ ಶಾಂತಿ ರಾಯಭಾರಿ - ICDRHRP IGO ಗಳ ಮಿಷನ್ ಗಳ ಮುಖ್ಯಸ್ಥ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, , ಗ್ಲೋಬೆಲಿಂಕ್ ವೆಸ್ಟ್ ಸ್ಟಾರ್ ಶಿಪ್ಪಿಂಗ್ ವ್ಯವಸ್ಥಾಪಕ ನಿರ್ದೇಶಕ ಮಾರ್ಟಿನ್ ಅರಾನ್ಹಾ, ಬುರ್ಜಿಲ್ ಹೋಲ್ಡಿಂಗ್ಸ್ ಗ್ರೂಪ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ಸುನಿಲ್, ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ನ ಸಹ-ಅಧ್ಯಕ್ಷ ಮತ್ತು ಸಿಇಒ ಮೊಹಮ್ಮದ್ ಆಶಿಫ್, ಅಡ್ವಾನ್ಸ್ ಟೆಕ್ನಿಕಲ್ ಸರ್ವಿಸಸ್ ನ ವ್ಯವಸ್ಥಾಪಕ ನಿರ್ದೇಶಕ ರವಿ ಶೆಟ್ಟಿ ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ. ಇವರೆಲ್ಲರ ಯಶೋಗಾಥೆಗಳು, ಉದ್ಯಮದಲ್ಲಿ ಸಾಗಿದ ಮೆಟ್ಟಿಲುಗಳ ಬಗ್ಗೆ ಹಾಕಿಕೊಟ್ಟ ಮೆಲುಕುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರೇಕ್ಷಕರಿಗೆ ಸ್ಪೂರ್ತಿ ನೀಡಿದವು.
ಗಲ್ಫ್ ಕರ್ನಾಟಕೋತ್ಸವ ಕೇವಲ ಪ್ರಶಸ್ತಿ, ಪುರಸ್ಕಾರಗಳಿಗೆ ಸೀಮಿತವಾಗಿರಲಿಲ್ಲ. ಕರ್ನಾಟಕದ ಸಂಸ್ಕೃತಿ ಮತ್ತು ಕಲಾ ಪರಂಪರೆಯ ನಿಜವಾದ ಆಚರಣೆಯಾಗಿತ್ತು . ಕಾರ್ಯಕ್ರಮದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು ಮತ್ತು ಹಾಸ್ಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿದವು. ಪಿಲಿ(ಹುಲಿ) ವೇಷದಂತಹ ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲಾಯಿತು. ಆ ಮೂಲಕ ಪ್ರೇಕ್ಷಕರನ್ನು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯತ್ತ ಸೆಳೆಯುವಂತೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರು ಮತ್ತು ಸಂಗೀತಗಾರರಾದ ಸಂತೋಷ್ ವೆಂಕಿ, ಗುರು ಕಿರಣ್ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಚೈತ್ರಾ ಎಚ್ ಜಿ ಅವರು ಕರ್ನಾಟಕ ಮತ್ತು ಗಲ್ಫ್ ದೇಶಗಳ ನಡುವಿನ ಸಂಸ್ಕೃತಿಗಳ ಸಾಮರಸ್ಯದ ಸಹಬಾಳ್ವೆಗೆ ಸಾಕ್ಷಿಯಾಗಿದರು. ತಮ್ಮ ಗಾಯನದ ಮೂಲಕ ರಂಜಿಸಿದರು. ಕನ್ನಡದ ಹಾಸ್ಯನಟರಾದ ಪ್ರಕಾಶ್ ತೂಮಿನಾಡ್ ಮತ್ತು ದೀಪಕ್ ರೈ ಪಾಣಾಜೆ ಅವರು ಪ್ರೇಕ್ಷಕರನ್ನುಹೊಟ್ಟೆ ತುಂಬಾ ನಗಿಸಿದರು.
ಗಲ್ಫ್ ಕರ್ನಾಟಕೋತ್ಸವವು ಉದ್ಯಮದ ಯಶಸ್ಸಿನ ಸಂಭ್ರಮ ಹಾಗೂ ಕರ್ನಾಟಕ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಬಲವಾದ ಬಾಂಧವ್ಯಕ್ಕೆ ಸಾಕ್ಷಿಯಾದ ಕಾರ್ಯಕ್ರಮವಾಗಿ ನಡೆಯಿತು. ಸಾಂಸ್ಕೃತಿಕ ವಿನಿಮಯ, ಆರ್ಥಿಕ ಬೆಳವಣಿಗೆ ಮತ್ತು ಪರಸ್ಪರರನ್ನು ಪರಿಚಯಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮ ಎರಡು ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಉದ್ಯಮಿಗಳ ಕೊಡುಗೆಗಳನ್ನು ಗುರುತಿಸುವ ಮತ್ತು ಗೌರವಿಸುವ ವಿಶಿಷ್ಟ ಕಾರ್ಯಕ್ರಮವಾಗಿ ಗಮನ ಸೆಳೆಯಿತು.