ಗಾಝಾಕ್ಕೆ 100 ದಶಲಕ್ಷ ಡಾಲರ್ ತುರ್ತು ನೆರವು ಘೋಷಿಸಿದ ಗಲ್ಫ್ ರಾಷ್ಟ್ರಗಳು
ಮಸ್ಕತ್: ಗಾಝಾ ಪಟ್ಟಿಗೆ 100 ದಶಲಕ್ಷ ಡಾಲರ್ ತುರ್ತು ನೆರವು ಘೋಷಿಸಿರುವುದಾಗಿ ಗಲ್ಫ್ ಸಹಕಾರ ಮಂಡಳಿ(ಜಿಸಿಸಿ) ಹೇಳಿದೆ.
ಮಸ್ಕತ್ನಲ್ಲಿ ನಡೆದ ಜಿಸಿಸಿಯ ವಿಶೇಷ ಸಭೆಯಲ್ಲಿ, ಸದಸ್ಯ ದೇಶಗಳ ವಿದೇಶಾಂಗ ಸಚಿವರು ಗಾಝಾ ಪಟ್ಟಿಗೆ ತುರ್ತು ಮಾನವೀಯ ಪರಿಹಾರ ಕಾರ್ಯಾಚರಣೆಯ ಜತೆಗೆ 100 ದಶಲಕ್ಷ ಡಾಲರ್ ಮೊತ್ತದ ಪರಿಹಾರ ನೆರವನ್ನು ಘೋಷಿಸಿದರು. ಬಹ್ರೇನ್, ಕುವೈಟ್, ಒಮನ್, ಖತರ್, ಸೌದಿ ಅರೆಬಿಯಾ ಮತ್ತು ಯುಎಇ ಸದಸ್ಯರಾಗಿರುವ ಐಸಿಸಿಯ ಸಭೆಯ ಅಂತ್ಯದಲ್ಲಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ‘ಈ ನೆರವಿನ ತುರ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು’ ಒತ್ತಿಹೇಳಲಾಗಿದೆ. ಆದರೆ ನೆರವನ್ನು ಗಾಝಾಕ್ಕೆ ಹೇಗೆ ತಲುಪಿಸಲಾಗುತ್ತದೆ ಎಂಬ ವಿವರ ಒದಗಿಸಿಲ್ಲ.
ಇತ್ತೀಚಿನ ದಿನಗಳಲ್ಲಿ ಗಲ್ಫ್ ರಾಷ್ಟ್ರಗಳು ಅಗತ್ಯದ ನೆರವನ್ನು ವಿಮಾನಗಳ ಮೂಲಕ ಈಜಿಪ್ಟ್ ನ ಅಲ್-ಅರಿಷ್ ಗೆ ರವಾನಿಸಿವೆ. ಇದನ್ನು ರಫಾ ಗಡಿದಾಟು(ಗಾಝಾಕ್ಕೆ ಸಂಪರ್ಕ ಕಲ್ಪಿಸುವ ಇಸ್ರೇಲಿನ ನಿಯಂತ್ರಣದಲ್ಲಿ ಇಲ್ಲದ ಏಕೈಕ ಗಡಿದಾಟು)ವಿನ ಮೂಲಕ ಗಾಝಾಕ್ಕೆ ತಲುಪಿಸುವ ಉದ್ದೇಶದ ಕಾರ್ಯಾಚರಣೆ ಇದಾಗಿದೆ.
‘ಗಾಝಾದ ಅಸಹಾಯಕ ನಾಗರಿಕರ ವಿರುದ್ಧದ ಎಲ್ಲಾ ರೀತಿಯ ಮಿಲಿಟರಿ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲು ಅಂತರಾಷ್ಟ್ರೀಯ ಸಮುದಾಯ ಒತ್ತಡ ಹೇರಬೇಕು. ಗಾಝಾದಿಂದ ಫೆಲೆಸ್ತೀನಿಯನ್ ಜನರನ್ನು ಬಲವಂತದಿಂದ ಸ್ಥಳಾಂತರಿಸುವ ಯಾವುದೇ ಕ್ರಮಗಳನ್ನು ಸ್ಪಷ್ಟವಾಗಿ ತಿರಸ್ಕರಿಸಬೇಕು. ಯಾಕೆಂದರೆ ಇದು ಮೂಲಭೂತ ಮಾನವ ಹಕ್ಕುಗಳು ಮತ್ತು ಅಂತರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಜಿಸಿಸಿ ಪ್ರಧಾನ ಕಾರ್ಯದರ್ಶಿ ಆಗ್ರಹಿಸಿದ್ದಾರೆ.