ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಿಂದ ಸಮಗ್ರ ಹವಾಮಾನ, ಭವಿಷ್ಯದ ಆರೋಗ್ಯ ಸೇವಾ ವೃತ್ತಿಪರರಿಗೆ ಸಂವಾದ ಕಾರ್ಯಾಗಾರ

Update: 2024-01-08 16:25 GMT

ದುಬೈ: ಹವಾಮಾನ ವೈಪರೀತ್ಯದ ಕುರಿತು ಚರ್ಚಿಸಲು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯು ಮಾನವ ಹಾಗೂ ಪರಿಸರ ಆರೋಗ್ಯದ ನಡುವಿನ ಅಂತರ್ ಸಂಬಂಧದ ಕುರಿತು ಬೆಳಕು ಚೆಲ್ಲಲು ‘ಹವಾಮಾನ ಬದಲಾವಣೆ ಮತ್ತು ಮಾನವರ ಆರೋಗ್ಯ’ ಎಂಬ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು.

ಸಮಯೋಚಿತ ಹಾಗೂ ಮಹತ್ವಪೂರ್ಣದ್ದಾಗಿದ್ದ ಈ ಕಾರ್ಯಾಗಾರವು ಜಾಗತಿಕ ಸ್ವಾಸ್ಥ್ಯದ ಮೇಲೆ ಹವಾಮಾನ ಬದಲಾವಣೆಯು ಬೀರಲಿರುವ ಪರಿಣಾಮಗಳ ಕುರಿತು ವಿಸ್ತೃತವಾಗಿ ಮನವರಿಕೆ ಮಾಡಿಕೊಟ್ಟಿತು.

ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಔಷಧ ಕಾಲೇಜಿನ ಉಪ ಶೈಕ್ಷಣಿಕ ಕುಲಪತಿ ಹಾಗೂ ಡೀನ್ ಆದ ಪ್ರೊ. ಮಂದಾ ವೆಂಕಟರಮಣ ಕಾರ್ಯಾಗಾರವನ್ನು ಉದ್ಘಾಟಿಸಿದರು. ನಂತರ, ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ಸಂಕೀರ್ಣ ವಿಭಜನೆಯ ಕುರಿತು ಒಳನೋಟಗಳನ್ನೊಳಗೊಂಡ ಚರ್ಚೆಯ ವೇದಿಕೆಯನ್ನು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದವರಿಗೆ ಒದಗಿಸಿದರು.

ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಗಣ್ಯ ವಾಗ್ಮಿಗಳ ಪೈಕಿ ಆಫ್ರಿಕಾ ಸೆಂಟರ್ ಫಾರ್ ಸಸ್ಟೈನಬಲ್ ಆ್ಯಂಡ್ ಇನ್ಕ್ಲುಸಿವ್ ಡೆವೆಲಪ್ ಮೆಂಟ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸಲೋಮೆ ಔವೊಂಡಾ, ಕೊಲಂಬಿಯಾ ಯೂನಿವರ್ಸಿಟಿಯ ಗ್ಲೋಬಲ್ ಕನ್ಸಾರ್ಷಿಯಮ್ ಆನ್ ಕ್ಲೈಮೇಟ್ ಆ್ಯಂಡ್ ಹೆಲ್ತ್ ಎಜುಕೇಷನ್ ಸಂಸ್ಥೆಯ ನಿರ್ದೇಶಕ ಡಾ. ಸೆಸಿಲಿಯ ಸೊರೇನ್ಸನ್, ಭಾರತದ ಎಡ್ವರ್ಡ್ ಆ್ಯಂಡ್ ಸಿಂಥಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನ ಡಾ. ಎಡ್ಮಂಡ್ ಫರ್ನಾಂಡೀಸ್, ಇರಾನ್ ನ ಇಸ್ಫಹಾನ್ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ನ ಸಹಾಯಕ ಪ್ರಾಧ್ಯಾಪಕ ಡಾ. ಫತೇಮೇ ರೆಝಿಯ, ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಸಮುದಾಯ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥ ಪ್ರೊ. ಶಂತ ಅಲ್ ಶರ್ಬಟ್ಟಿ ಹಾಗೂ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಔದ್ಯೋಗಿಕ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಮುಹಮ್ಮದ್ ಅಬ್ದುಲ್ ರಝಾಕ್ ಇದ್ದರು.

ಸಹಭಾಗಿತ್ವ ಪ್ರಯತ್ನದ ಕುರಿತು ಮಾತನಾಡಿದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಕುಲಪತಿ ಪ್ರೊ. ಹೊಸಮ್ ಹಮ್ದಿ, “ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯು ಸುಧಾರಿತ ಪ್ರವೇಶ ಹಾಗೂ ಗುಣಮಟ್ಟದ ಆರೋಗ್ಯ ಶಿಕ್ಷಣ ನೀಡುವಲ್ಲಿ ಮಹತ್ವದ ಹೆಜ್ಜೆ ಗುರುತನ್ನು ಮೂಡಿಸಿದೆ. ನಮ್ಮ ಬದ್ಧತೆಯು ಖಾಸಗೀಕರಣ ಮತ್ತು ಉದ್ಯಮ ಅಭಿವೃದ್ಧಿಗೆ ದೃಢವಾದ ಮೂಲಸೌಕರ್ಯದ ನೆರವಿನೊಂದಿಗೆ ಆರೋಗ್ಯ ಸೇವೆ ಮತ್ತು ಉನ್ನತ ಶಿಕ್ಷಣವನ್ನು ನೀಡುವತ್ತ ಇದೆ. ಜಾಗತಿಕ ವೈವಿಧ್ಯತೆಯನ್ನು ಪರಿಗಣನೆಗೆ ತೆಗೆದುಕೊಂಡು, ನಮ್ಮ ವಿಶ್ವವಿದ್ಯಾಲಯವು ನಮ್ಮ ವೈವಿಧ್ಯಮಯ ವಿದ್ಯಾರ್ಥಿ ಸಮೂಹಕ್ಕೆ ಬಹುಶಿಸ್ತೀಯ ವಿಷಯಗಳನ್ನು ಪರಿಚಯಿಸಿದೆ. ಹವಾಮಾನ ಬದಲಾವಣೆಯನ್ನು ಆರೋಗ್ಯ ವೃತ್ತಿಪರ ಶಿಕ್ಷಣ ದೊಂದಿಗೆ ಏಕೀಕರಣಗೊಳಿಸುವುದು ಈ ಹಿಂದೆಂದಿಗಿಂತ ಈಗ ಹೆಚ್ಚು ಅನಿವಾರ್ಯವಾಗಿದ್ದು, ನಮ್ಮ ವಿದ್ಯಾರ್ಥಿಗಳು ಪ್ರತಿ ನಿತ್ಯ ವಿಕಸನಗೊಳ್ಳುತ್ತಿರುವ ಜಗತ್ತನ್ನು ನಿಭಾಯಿಸುವುದನ್ನು ರೂಢಿಸಿಕೊಳ್ಳುವುದನ್ನು ಖಾತ್ರಿಗೊಳಿಸಬೇಕಿದೆ” ಎಂದು ಅಭಿಪ್ರಾಯ ಪಟ್ಟರು.

ಈ ನಡುವೆ, ನ್ಯೂಯಾರ್ಕ್ ನ ಕೊಲಂಬಿಯಾ ಯೂನಿವರ್ಸಿಟಿಯ ಗ್ಲೋಬಲ್ ಕನ್ಸಾರ್ಷಿಯಮ್ ಆನ್ ಕ್ಲೈಮೇಟ್ ಆ್ಯಂಡ್ ಹೆಲ್ತ್ ಎಜುಕೇಷನ್ ವಿಭಾಗದ ನಿರ್ದೇಶಕ ಡಾ. ಸೆಸಿಲಿಯ ಸೊರೇನ್ಸನ್, “ಹವಾಮಾನ ಹಾಗೂ ಆರೋಗ್ಯದ ನಡುವಿನ ಸಂಬಂಧವನ್ನು ವಿಭಾಗಿಸುವಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ನಡೆಸುತ್ತಿರುವ ಪ್ರಯತ್ನವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ಈಗಿನ ಪರಿಸ್ಥಿತಿಯಲ್ಲಿ ಶುಶ್ರೂಷಕಿಯರು, ವೈದ್ಯರು ಹಾಗೂ ಔಷಧ ತಜ್ಞರು ಸೇರಿದಂತೆ ನಮ್ಮ ಆರೋಗ್ಯ ಸೇವೆಯ ವೃತ್ತಿಪರರು ಆರೋಗ್ಯದ ಮೇಲಿನ ಹವಾಮಾನ ಪರಿಣಾಮದ ಕುರಿತು ಅರ್ಥ ಮಾಡಿಕೊಳ್ಳಲು ಜ್ಞಾನದೊಂದಿಗೆ ಸಜ್ಜುಗೊಂಡಿರಬೇಕಾಗುತ್ತದೆ. ಅವರು ನಮ್ಮ ರೋಗಿಗಳು ಹಾಗೂ ಸಮುದಾಯಗಳ ಪ್ರಥಮ ಮತ್ತು ಕೊನೆಯ ರಕ್ಷಣಾ ತಂಡವಾಗಿ ಸೇವೆ ಸಲ್ಲಿಸುತ್ತಾರೆ. ಇತ್ತೀಚೆಗೆ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ಆಯೋಜನೆಗೊಂಡಿದ್ದ ಸಿಒಪಿಯು ಮಹತ್ವದ ಮೈಲಿಗಲ್ಲಾಗಿದ್ದು, ಆರೋಗ್ಯದತ್ತ ತನ್ನ ಎಲ್ಲ ವಲಯವನ್ನು ಮೀಸಲಾಗಿಟ್ಟಿತ್ತು. ಈ ನಡೆಯು ಆರೋಗ್ಯ ಪ್ರಾಮು ಖ್ಯತೆಯನ್ನು ಹವಾಮಾನ ನೀತಿಗಳೊಂದಿಗೆ ಏಕೀಕರಣಗೊಳಿಸಬೇಕಾದ ಮಹತ್ವನ್ನು ಸಾರಿತು. ನಮ್ಮ ಎಲ್ಲ ಮಾತುಕತೆ ಗಳು ಒಳಗೊಂಡಿರುವ ಇಂಧನ, ಸಾರಿಗೆ ಮತ್ತು ಔದ್ಯಮೀಕರಣವು ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಒಮ್ಮುಖ ಅವಿಭಜಿತ ಸಂಗತಿಯಾಗಿರಬೇಕು ಎಂದು ನಾನು ಬಯಸುತ್ತೇನೆ. ಈ ಕಾರ್ಯಾಗಾರವು ಸರಿಯಾದ ದಿಕ್ಕಿನತ್ತ ತನ್ನ ಹೆಜ್ಜೆ ಇಟ್ಟಿರುವುದು ಮಹತ್ವಪೂರ್ಣವಾಗಿದ್ದರೂ, ಇನ್ನೂ ಸಾಕಷ್ಟು ಕೆಲಸ ಆಗಬೇಕಾಗಿದೆ” ಎಂದು ಪ್ರತಿಪಾದಿಸಿದರು.

ಈ ಕಾರ್ಯಾಗಾರವು ಪೂರ್ವಭಾವಿ ಕ್ರಮಗಳು, ನೀತಿ ಉಪಕ್ರಮಗಳು ಹಾಗೂ ಮಾನವ ಆರೋಗ್ಯಕ್ಕೆ ಸವಾಲು ಒಡ್ಡಿರುವ ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಸಹಭಾಗಿತ್ವ ಪ್ರಯತ್ನಗಳ ಅಗತ್ಯದ ಕುರಿತು ಚರ್ಚೆಗಳಿಗೆ ಅವಕಾಶ ಒದಗಿಸಿತು. ಈ ಕಾರ್ಯಾಗಾರವು ಬಹುಶಿಸ್ತೀಯ ವಿನಿಮಯ, ನಮ್ಮ ಗ್ರಹದ ಮೇಲಾಗುತ್ತಿರುವ ವಿಕಸನದ ಪರಿಣಾಮ ಗಳನ್ನು ತಗ್ಗಿಸುವ ಮತ್ತು ಅಳವಡಿಸಿಕೊಳ್ಳುವ ಬಗ್ಗೆ ಸಮಗ್ರ ಧೋರಣೆಯನ್ನು ಹಂಚಿಕೊಳ್ಳುವ ವೇದಿಕೆಯಾಗಿ ಕಾರ್ಯ ನಿರ್ವಹಿಸಿತು.

ಇವರೊಂದಿಗೆ, ಮಾನವ ಆರೋಗ್ಯ ಹಾಗೂ ಹವಾಮಾನ ಬದಲಾವಣೆಯ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದ್ದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಉಪಕ್ರಮವನ್ನು ಭಾರತದ ಎಡ್ವರ್ಡ್ ಆ್ಯಂಡ್ ಸಿಂಥಿಯ ಇನ್ಸ್ ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಡಾ. ಎಡ್ಮಂಡ್ ಫರ್ನಾಂಡೀಸ್ ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News