ಪುತ್ತೂರು ತಾಲೂಕಿನ ಎನ್.ಆರ್.ಐ ಉದ್ಯಮಿಗಳಿಂದ ಶಾಸಕ ಅಶೋಕ್ ರೈಗೆ ಸೌದಿಯಲ್ಲಿ ಸನ್ಮಾನ

Update: 2024-02-12 08:30 GMT

ಜುಬೈಲ್: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಅಶೋಕ್ ರೈ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಖಜಾಂಚಿ, ವಕೀಲರಾದ ಪದ್ಮರಾಜ್‌ ಆರ್‌ ಅವರನ್ನು ಜುಬೈಲ್ ನಲ್ಲಿರುವ ಪುತ್ತೂರಿನ ಅನಿವಾಸಿ ಉದ್ಯಮಿಗಳು ಜುಬೈಲ್‌ನ ಪುಲಿ ರೆಸ್ಟೋರೆಂಟ್‌ ನಲ್ಲಿ  ಸನ್ಮಾನಿಸಿದರು.

ಪುತ್ತೂರು ತಾಲೂಕಿನ ಸೌಹಾರ್ದತೆ ಮತ್ತು ಅಭಿವೃದ್ಧಿಯ ಕಾರ್ಯದಲ್ಲಿ ಶಾಸಕರೊಂದಿಗೆ ಕೈ ಜೋಡಿಸುವ ಭರವಸೆ ನೀಡಿದ ಎನ್.ಆರ್.ಐ.ಗಳು ತಾಲೂಕಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಿಸುವ ಬಗ್ಗೆ ಹಾಗೂ ಈಗಾಗಲೇ ಮಂಜೂರಾಗಿರುವ ಕ್ರೀಡಾಂಗಣದ ಅಭಿವೃದ್ಧಿಗೆ ಮುತುವರ್ಜಿ ವಹಿಸಿರುವ ಶಾಸಕ ಅಶೋಕ್ ರೈ ಅವರ ಪ್ರಯತ್ನವನ್ನು ಶ್ಲಾಘಿಸಿದರು.

ಸೌದಿಯಲ್ಲಿ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಆಗಮಿಸಿದ್ದ ಶಾಸಕರನ್ನು ಅರಬ್ ರಾಷ್ಟ್ರದ ವಿವಿಧ ಭಾಗಗಳಲ್ಲಿ ಉದ್ಯಮ ಮತ್ತು ವ್ಯವಹಾರಗಳಲ್ಲಿ ತೊಡಗಿಸಿರುವ ಪುತ್ತೂರಿನ ಅನಿವಾಸಿಗಳು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ ಅವರೊಂದಿಗೆ ಹಲವು ಕ್ರಿಯಾಶೀಲ ವಿಷಯಗಳ ಕುರಿತು ಸಮಾಲೋಚಿಸಿದರು. ಈ ಸಂದರ್ಭ ಶಾಸಕರಾದ ಅಶೋಕ್ ರೈ ಅವರು ತಾಲೂಕಿನ ಪ್ರಗತಿಗೆ ಅನಿವಾಸಿಗಳ ಕೊಡುಗೆಯನ್ನು ಸ್ಮರಿಸಿದರು.‌

ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದ ಅನಿವಾಸಿಗಳ ಪೈಕಿ ಉದ್ಯಮಿ, ಜೆಸಿಸಿ ಕೆ.ಐ.ಸಿ ಗಲ್ಫ್ ಕಮಿಟಿಯ ಅಧ್ಯಕ್ಷರಾದ ಅಶ್ರಫ್ ಶಾ ಮಾಂತೂರು, ಕೆ.ಐ.ಸಿ ಜುಬೈಲ್ ಅಧ್ಯಕ್ಷರಾದ ಉದ್ಯಮಿ ತಾಹಿರ್ ಸಾಲ್ಮರ, ಪುತ್ತೂರು ಕಮ್ಯುನಿಟಿ ಸೆಂಟರ್ ನ ಅಧ್ಯಕ್ಷರಾದ ಅಮ್ಜದ್ ಖಾನ್ ಪೊಳ್ಯ, ಉದ್ಯಮಿಗಳಾದ ಫೈರೋಝ್ ಪರ್ಲಡ್ಕ, ಲತೀಫ್ ಮರಕ್ಕನಿ, ಇಸ್ಮಾಯಿಲ್ ಕೂರ್ನಡ್ಕ, ನಿಝಾಮ್ ಅರಂಡ, ಹಾರಿಸ್ ಅರಂಡ, ಆಸಿಫ್ ದರ್ಬೆ, ಫೈಝಲ್ ಉಪ್ಪಿನಂಗಡಿ, ಸುಹೈಲ್ ಕೊಡಿಯಾಡಿ ಹಾಗು ಇತರರು ಉಪಸ್ಥಿತರಿದ್ದರು.

ಫಾರೂಕ್ ಪೋರ್ಟ್ ವೇ ಅವರು ಧನ್ಯವಾದ ಸಲ್ಲಿಸಿ, ಮಾತನಾಡುತ್ತಾ "ಅನಿವಾಸಿ ಕನ್ನಡಿಗರು ಇಲ್ಲಿ ಸರ್ವ ಧರ್ಮಿಯರು ಸೋದರರಂತೆ ಬದುಕುತ್ತಿದ್ದೇವೆ. ಒಬ್ಬರಿಗೊಬ್ಬರು ಸಹಕರಿಸಿಕೊಂಡು ಇಲ್ಲಿ ಕನ್ನಡ ನಾಡು, ನುಡಿಗಾಗಿ ನಿಸ್ವಾರ್ಥವಾಗಿ ಒಗ್ಗಟ್ಟಾಗಿ ದುಡಿಯುತ್ತಿದ್ದೇವೆ. ಅನಿವಾಸಿ ಕನ್ನಡಿಗರು ಸದಾ ತಮ್ಮ ನಾಡಿನ, ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಸಹಕರಿಸುತ್ತಾ ಬಂದಿದ್ದಾರೆ. ಅರಬ್ ನಾಡಿನಲ್ಲೂ ಕನ್ನಡ ಕಹಳೆ ಮೊಳಗಬೇಕು ಎಂಬ ಉದ್ದೇಶದಿಂದ ದಮಾಮ್ ನಲ್ಲಿ ಎಲ್ಲರೂ ಸೇರಿ ವರ್ಣ ರಂಜಿತ ಕನ್ನಡ ಸಂಸ್ಕೃತಿ ಸಮ್ಮೇಳನ ಆಯೋಜಿಸಿದ್ದೇವೆ. ಅನಿವಾಸಿಗಳ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News