ಕಲಬುರಗಿ ಮೂಲದ ಡಾ. ಸೈಯದ್ ಅನ್ವರ್ ಖುರ್ಷಿದ್ ಗೆ ‘2025ರ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ’ ಪ್ರದಾನ
ಹೊಸದಿಲ್ಲಿ: ಸೌದಿ ಅರೇಬಿಯಾದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಭಾರತೀಯ ವೈದ್ಯರಲ್ಲಿ ಓರ್ವರಾದ ಡಾ. ಸೈಯದ್ ಅನ್ವರ್ ಖುರ್ಷಿದ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ ‘2025ರ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದ್ದಾರೆ.
ಡಾ. ಅನ್ವರ್ ಖುರ್ಷಿದ್ ಅವರು ಮೂಲತಃ ಕಲಬುರ್ಗಿಯವರಾಗಿದ್ದು, ಸೌದಿ ಅರೇಬಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ 45 ವರ್ಷಗಳ ಸೇವಾ ಅನುಭವ ಹೊಂದಿರುವ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಡಿಶಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘2025ರ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ.
ಡಾ. ಅನ್ವರ್ ಖುರ್ಷಿದ್ ಸೌದಿ ಅರೇಬಿಯಾದ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ 30 ವರ್ಷಗಳ ಕಾಲ ಮತ್ತು ರಿಯಾದ್ ನಲ್ಲಿ ರಾಯಲ್ ಪ್ರೋಟೋಕಾಲ್ ವೈದ್ಯರಾಗಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, COVID-19 ವೇಳೆ ಗಣನೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಹಜ್ ಯಾತ್ರಿಗಳಿಗೆ ನಿರ್ಣಾಯಕ ಆರೈಕೆ, ವೈದ್ಯಕೀಯ ಸೇವೆಯ ಮೇಲ್ವಿಚಾರಣೆ ಮಾಡಿದ್ದಾರೆ. ಡಾ. ಅನ್ವರ್ ಖುರ್ಷಿದ್ ಅವರು ಶಿಕ್ಷಣ ಕ್ಷೇತ್ರಕ್ಕೂ ಗಣನೀಯವಾಗಿ ಕೊಡುಗೆಯನ್ನು ನೀಡಿದ್ದು, ತೈಫ್ ನಲ್ಲಿ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್ ಅನ್ನು ಸ್ಥಾಪಿಸಿದ್ದಾರೆ.
ʼಪ್ರಶಸ್ತಿ ಘೋಷಣೆಯಿಂದ ನಾನು ನಿಜವಾಗಿಯೂ ಸಂತೋಷಗೊಂಡಿದ್ದೇನೆ, ನಾನು ಪ್ರಶಸ್ತಿಯ ಆಕಾಂಕ್ಷಿಯಾಗಿರಲಿಲ್ಲ, ಪ್ರಶಸ್ತಿಗೆ ಸಂಬಂಧಿಸಿದ ಗೌರವ, ಪ್ರತಿಷ್ಠೆಯ ಬಗ್ಗೆ ನನಗೆ ತಿಳಿದಿದೆ. ಇದು ಜೀವಮಾನದ ಸಾಧನೆಯಾಗಿದೆ ʼಎಂದು ಅನ್ವರ್ ಖುರ್ಷಿದ್ ಹೇಳಿದ್ದಾರೆ.
2003ರಿಂದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ. ವೈದ್ಯಕೀಯ ಕ್ಷೇತ್ರ, ಸಮುದಾಯ ಸೇವೆ, ಶಿಕ್ಷಣ, ವ್ಯಾಪಾರ ಮತ್ತು ಸಾರ್ವಜನಿಕ ವ್ಯವಹಾರಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಗರೋತ್ತರ ಭಾರತೀಯರ ಅಸಾಧಾರಣ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಬಾರಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಸ್ವೀಕರಿಸಿದ 27 ಸಾಧಕರಲ್ಲಿ ಡಾ. ಖುರ್ಷಿದ್ ಸೇರಿದ್ದಾರೆ.
ಈ ಪ್ರಶಸ್ತಿಯು ವೈದ್ಯಕೀಯ ವಿಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡಾ.ಖುರ್ಷಿದ್ ಅವರ ಅತ್ಯುತ್ತಮ ಸಾಧನೆಗಳು ಮತ್ತು ಸೌದಿ ಅರೇಬಿಯಾದಲ್ಲಿನ ಭಾರತೀಯ ಸಮುದಾಯದ ಕಲ್ಯಾಣಕ್ಕೆ ಅವರ ದೀರ್ಘಕಾಲದ ಕೊಡುಗೆಯನ್ನು ಗುರುತಿಸಿ ನೀಡಲಾಗಿದೆ ಎಂದು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ.ಸುಹೇಲ್ ಅಜಾಝ್ ಖಾನ್ ಪ್ರತಿಕ್ರಿಯಿಸಿದ್ದಾರೆ.
ಈ ಮೊದಲು ಹಲವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸೌದಿ ಅರೇಬಿಯಾದ ಕಿಂಗ್ ಫಹದ್ ಬಿನ್ ಅಬ್ದುಲ್ ಅಝೀಜ್ ಅವರ ವೈಯಕ್ತಿಕ ವೈದ್ಯರಾಗಿದ್ದ ಡಾ. ಮಜಿದ್ ಕಾಝಿ ಅವರಿಗೆ 2006ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ನೀಡಲಾಗಿತ್ತು. ಜಿದ್ದಾದ ಇಂಟರ್ ನ್ಯಾಷನಲ್ ಸ್ಕೂಲ್ ನ ಸಂಸ್ಥಾಪಕರು ಮತ್ತು ಸಾಮಾಜಿಕ ಕಾರ್ಯಕರ್ತರಾದ ರಫಿಯುದ್ದೀನ್ ಫಜುಲ್ಭೋಯ್ ಅವರಿಗೆ 2008ರಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2011ರಲ್ಲಿ ಈ ಪ್ರಶಸ್ತಿಯನ್ನು ಖ್ಯಾತ ಮಕ್ಕಳ ತಜ್ಞ ಡಾ.ಎಂ.ಎಸ್. ಕರಿಮುದ್ದೀನ್ ಮತ್ತು 2014ರಲ್ಲಿ ಶಿಹಾಬ್ ಕೊಟ್ಟುಕಾಡ್ ಅವರಿಗೆ ನೀಡಿ ಗೌರವಿಸಲಾಗಿತ್ತು. ರಿಯಾದ್ ನಲ್ಲಿ ಮೊದಲ ಬಾರಿಗೆ ಭಾರತೀಯ ಶಾಲೆಯನ್ನು ಪ್ರಾರಂಭಿಸಿದ ಶಿಕ್ಷಣ ತಜ್ಞ ಜೀನತ್ ಜಾಫ್ರಿ ಅವರಿಗೆ 2017ರಲ್ಲಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗಿದೆ. 2021 ರಲ್ಲಿ ಡಾ. ಸಿದ್ದೀಕ್ ಅಹ್ಮದ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.