ಜನರನ್ನು ಕೊಲ್ಲಲು ಇಸ್ರೇಲ್‌ಗೆ ಅನಿಯಂತ್ರಿತ ಅಧಿಕಾರ ನೀಡಬಾರದು: ಕತರ್‌ನ ಅಮೀರ್
ದೋಹಾ,ಕತರ್: ಹಮಾಸ್ ವಿರುದ್ಧದ ಹೋರಾಟದಲ್ಲಿ ಫೆಲೆಸ್ತೀನಿಗಳನ್ನು ಕೊಲ್ಲಲು ಇಸ್ರೇಲ್‌ಗೆ ಅನಿಯಂತ್ರಿತ ಅಧಿಕಾರವನ್ನು ನೀಡದಂತೆ ಕತರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರು ಮಂಗಳವಾರ ಅಂತರರಾಷ್ಟ್ರಿಯ ಸಮುದಾಯವನ್ನು ಆಗ್ರಹಿಸಿದರು. ಇಸ್ರೇಲ್-ಹಮಾಸ್ ಯುದ್ಧವನ್ನು ಅವರು, ಜಾಗತಿಕ ಭದ್ರತೆಗೆ ಬೆದರಿಕೆಯೊಡ್ಡಿರುವ ಆತಂಕಕಾರಿ ಬೆಳವಣಿಗೆ ಎಂದು ಬಣ್ಣಿಸಿದರು.
ಕತರ್‌ನ ಶೂರಾ ಮಂಡಳಿಯ ಅಧಿವೇಶನ ಆರಂಭದಲ್ಲಿ ತನ್ನ ವಾರ್ಷಿಕ ಭಾಷಣದಲ್ಲಿ ಎಮಿರ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇಸ್ರೇಲ್ ಮತ್ತು ಹಮಾಸ್ ನಡುವೆ ಮಧ್ಯಸ್ಥಿಕೆ ವಹಿಸಲು ಕತರ್ ತನ್ನ ಇತ್ತೀಚಿನ ಪ್ರಯತ್ನಗಳನ್ನು ಆರಂಭಿಸಿದ ಬಳಿಕ ಇದು ಅಮೀರ್ ಪ್ರಥಮ ಪ್ರತಿಕ್ರಿಯೆಯಾಗಿದೆ.
ಹಮಾಸ್ ಅ.7ರಂದು ಇಸ್ರೇಲ್ ಮೇಲೆ ನಡೆಸಿದ್ದ ದಿಢೀರ್ ದಾಳಿಯಲ್ಲಿ 1,400ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 200ಕ್ಕೂ ಅಧಿಕ ಜನರನ್ನು ಅದು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ. ಫೆಲೆಸ್ತೀನಿ ಆರೋಗ್ಯ ಸಚಿವಾಲಯದ ಹೇಳಿಕೆಯಂತೆ ಈ ಎರಡು ವಾರಗಳಲ್ಲಿ ಇಸ್ರೇಲ್ ಗಾಝಾದ ಮೇಲೆ ನಡೆಸಿರುವ ವಾಯುದಾಳಿಗಳಲ್ಲಿ 5,000 ಜನರು ಕೊಲ್ಲಲ್ಪಟ್ಟಿದ್ದಾರೆ.
ಆಗಿನಿಂದಲೂ ಕತರ್ ಇಸ್ರೇಲ್ ಮತ್ತು ಹಮಾಸ್ ಜೊತೆ ಮುಕ್ತ ಸಂವಾದಗಳಲ್ಲಿ ತೊಡಗಿಕೊಂಡಿದ್ದು, ಫಲಶ್ರುತಿಯಾಗಿ ಹಮಾಸ್ ಇಬ್ಬರು ಇಸ್ರೇಲಿ ಮಹಿಳೆಯರು ಸೇರಿದಂತೆ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದೆ.
‘ನಾವು ನೋಡುತ್ತಿರುವ ಈ ಆತಂಕಕಾರಿ ಬೆಳವಣಿಗೆಯ ವಿರುದ್ಧ ಗಂಭೀರವಾದ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ನಿಲುವಿಗಾಗಿ ನಾವು ಕರೆ ನೀಡುತ್ತಿದ್ದೇವೆ. ಈ ಬೆಳವಣಿಗೆಯು ಪ್ರದೇಶದ ಮತ್ತು ವಿಶ್ವದ ಭದ್ರತೆಗೆ ಬೆದರಿಕೆಯನ್ನೊಡ್ಡಿದೆ ’ ಎಂದ ಶೇಖ್ ತಮೀಮ್, ‘ಇಬ್ಬಗೆ ನಿಲುವುಗಳನ್ನು ಮತ್ತು ಫೆಲೆಸ್ತೀನಿ ಮಕ್ಕಳ ಜೀವಗಳು ಲೆಕ್ಕಕ್ಕಿಲ್ಲ ಎಂಬಂತೆ ವರ್ತಿಸುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದರು.