ʼSKMWAʼ ನೂತನ ಅಧ್ಯಕ್ಷರಾಗಿ ಸುಹೈಬ್ ಅಹ್ಮದ್ ಆಯ್ಕೆ

Update: 2024-01-13 12:50 GMT

ದೋಹಾ: ಖತರ್ ನಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧೀನದಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾನ್ಯತೆ ಪಡೆದಿರುವ ʼಸೌತ್‌ ಕೆನರಾ ಮುಸ್ಲಿಮ್‌ ವೆಲ್ಫೇರ್‌ ಅಸೋಸಿಯೇಶನ್ʼ (SKMWA) ನೂತನ ಅಧ್ಯಕ್ಷರಾಗಿ ಸುಹೈಬ್ ಅಹ್ಮದ್ ಚುನಾಯಿತರಾಗಿದ್ದಾರೆ.

ಅವರ ಅಧಿಕಾರಾವಧಿಯು 2024-2026ರವರೆಗೆ ಇರುತ್ತದೆ. ಸಂಘದ 32ನೇ ಸಾಮಾನ್ಯ ಸಭೆಯಲ್ಲಿ ಸುಹೈಬ್ ಅಹ್ಮದ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇದಕ್ಕೂ ಮುನ್ನ ಸಭೆಯನ್ನು ಮೊಯಿಝ್ ಇಮ್ರಾನ್ ಅವರ ಕುರಾನ್ ಪಠಣದ ಮೂಲಕ ಪ್ರಾರಂಭಿಸಲಾಯಿತು. ಕಾಸಿಮ್ ಉಡುಪಿ ಸ್ವಾಗತಿಸಿದರು. ನಾಸಿರ್ ಉಳ್ಳಾಲ ಹಾಗೂ ಮುಹಮ್ಮದ್ ಇಮ್ರಾನ್ ಕ್ರಮವಾಗಿ ವಾರ್ಷಿಕ ಮತ್ತು ಆರ್ಥಿಕ ವರದಿಗಳನ್ನು ಮಂಡಿಸಿದರು. ನಂತರ ಮಾತನಾಡಿದ ನಿರ್ಗಮಿತ ಅಧ್ಯಕ್ಷ ಅಬ್ದುಲ್ ರಝಾಕ್ ಪುತ್ತೂರು, 2022 ಮತ್ತು 2023ರ ಅವಧಿಯಲ್ಲಿ ನಡೆದಿದ್ದ ಸಮಿತಿಯ ಚಟುವಟಿಕೆಗಳ ಮಾಹಿತಿ ನೀಡಿದರು.

ಸಂಘದ ಇತರ ಪದಾಧಿಕಾರಿಗಳೂ ಸುಹೈಬ್ ಅಹ್ಮದ್ ಅವರೊಂದಿಗೆ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರನ್ನಾಗಿ ರಿಝ್ವಾನ್ ಅಹ್ಮದ್ ಹಾಗೂ ಇಮ್ರಾನ್ ಅಹ್ಮದ್ ಬಾವ, ಜಂಟಿ ಕಾರ್ಯದರ್ಶಿಗಳನ್ನಾಗಿ ಅನ್ವರ್ ಉಳ್ಳಾಲ ತೋಟ ಹಾಗೂ ಅಬ್ದುಲ್ ರಶೀದ್ ಬಿಸಿರೋಡ್ ಅವರನ್ನು ನೇಮಕ ಮಾಡಲಾಯಿತು.‌

ಮುಹಮ್ಮದ್ ಫೈಸಲ್ ಶೇಖ್ ಮತ್ತು ಅಹ್ಮದ್ ಶಂಶೀರ್ ಮುಹಮ್ಮದ್ ಖಜಾಂಚಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ಮುಹಮ್ಮದ್ ಶರೀಫ್ ಹಾಗೂ ಮುಹಮ್ಮದ್ ಇಮ್ರಾನ್ ಬಂಟ್ವಾಳ ಸಂಘಟನೆಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದರೆ. ಮಹಮ್ಮದ್ ಮನ್ಸೂರ್ ಇಮ್ತಿ ಮತ್ತು ಶಮೀರ್ ಮಾಹಿನ್ ಅಹ್ಮದ್ ಕ್ರೀಡಾ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ಅಮೀರ್ ಹಮ್ಝಾ, ಇಮ್ತಿಯಾಝ್ ಅಬ್ದುಲ್ ರಝಾಕ್, ಸಲೀಮ್ ಉಳ್ಳಾಲ, ಇಲ್ಯಾಸ್ ಮುರಿಯಾಲ ಹಾಗೂ ಮುಹಮ್ಮದ್ ಕೊಂಡನ ಕಾರ್ಯಕ್ರಮ ಕಾರ್ಯದರ್ಶಿಗಳಾಗಿದ್ದಾರೆ. ಇವರೊಂದಿಗೆ, ಅಬ್ದುಲ್ ಆಶಿಕ್, ಅಹ್ಮದ್ ಇರ್ಫಾನ್, ಮುಹಮ್ಮದ್ ಶಮೀರ್ ಪುಂಜಾಲಕಟ್ಟೆ, ಮಹಮ್ಮದ್ ನೌಶಿಕ್ ಹಾಗೂ ಹಸನ್ ನಿಝಾಮುದ್ದೀನ್ ಕಾರ್ಯಕ್ರಮ ಸಂಯೋಜಕರಾಗಿ ನೇಮಕವಾಗಿದ್ದಾರೆ.

ನಂತರ ಮಾತನಾಡಿದ ನೂತನ ಅಧ್ಯಕ್ಷ ಸುಹೈಬ್ ಅಹ್ಮದ್, ತಮ್ಮ ಅವಧಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿರುವ ನಿರ್ಗಮಿತ ತಂಡವನ್ನು ಹೃದಯಪೂರ್ವಕವಾಗಿ ಅಭಿನಂದಿಸಿದರು. ನಿರ್ಗಮಿತ ತಂಡದ ಅರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮದಿಂದಾಗಿ ಹೊಸ ಅವಕಾಶಗಳು ಹಾಗೂ ಸವಾಲುಗಳು ಎದುರಾಗಿವೆ ಎಂದು ಅವರು ಪ್ರಶಂಸಿಸಿದರು. ನೂತನ ಚುನಾಯಿತ ತಂಡವು SKMWA ಸಂಘದ ಪ್ರತಿಷ್ಠೆ ಮತ್ತು ಪರಂಪರೆಯನ್ನು ಎತ್ತಿ ಹಿಡಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯ ಆತಿಥ್ಯ ವಹಿಸಿದ್ದ ಉಪಾಧ್ಯಕ್ಷ ಮುಹಮ್ಮದ್ ಶರೀಫ್ ಅವರ ವಂದನಾರ್ಪಣೆಯೊಂದಿಗೆ ಸಭೆ ಸಮಾರೋಪಗೊಂಡಿತು.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News