ಬಹರೈನ್ ಇಂಡಿಯಾ ಸೊಸೈಟಿ (BIS)ಯಿಂದ ಸ್ಪೀಕರ್ ಯು.ಟಿ.ಖಾದರ್‌ಗೆ ಸನ್ಮಾನ
ಬಹರೈನ್: ಇಲ್ಲಿನ ರಾಡಿಸನ್ ಹೋಟೆಲ್ ನಲ್ಲಿ ಡಿಸೆಂಬರ್ 21ರಂದು ನಡೆದ ಸಮಾರಂಭದಲ್ಲಿ ಬಹ್ರೇನ್ ಇಂಡಿಯಾ ಸೊಸೈಟಿ (BIS) ವತಿಯಿಂದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ವಿದ್ಯಾರ್ಥಿ ಯೂನಿಯನ್ ನಾಯಕನಿಂದ ಸ್ಪೀಕರ್ ಸ್ಥಾನದವರೆಗೆ ಖಾದರ್ ಅವರ ರಾಜಕೀಯ ಪ್ರಯಾಣವನ್ನು ಮತ್ತು ಅವರ ಮಹತ್ವದ ಕೊಡುಗೆಗಳನ್ನು ಸಮಾರಂಭದಲ್ಲಿ ಮೆಲುಕು ಹಾಕಲಾಯಿತು.
ಮುಖ್ಯ ಅತಿಥಿಯಾಗಿ ಬಹರೈನ್ ನಲ್ಲಿ ಭಾರತೀಯ ರಾಯಭಾರಿ ವಿನೋದ್ ಕೆ ಜೇಕಬ್ ಉಪಸ್ಥಿತರಿದ್ದರು. ಬಹ್ರೇನ್ ಇಂಡಿಯಾ ಸೊಸೈಟಿಯ(BIS) ಪದಾಧಿಕಾರಿಗಳು, ಸದಸ್ಯರು, ಸರ್ಕಾರಿ ಅಧಿಕಾರಿಗಳು, ಖಾಸಗಿ ವಲಯದ ಪ್ರತಿನಿಧಿಗಳು ಮತ್ತು ಪ್ರಮುಖ ಉದ್ಯಮಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಬಹ್ರೇನ್ ಇಂಡಿಯಾ ಸೊಸೈಟಿ(BIS)ಯ ಮಂಡಳಿ ಸದಸ್ಯರಾದ ಮಹಮ್ಮದ್ ಮನ್ಸೂರ್ ಮಾತನಾಡಿ,
"ಆರೋಗ್ಯ, ವಸತಿ, ನಗರಾಭಿವೃದ್ಧಿ, ಆಹಾರ ಸೇರಿದಂತೆ ನಿರ್ಣಾಯಕ ಸಂಪುಟ ಸ್ಥಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿ ರುವ ಖಾದರ್ ಅವರು ಈಗ ಸ್ಪೀಕರ್ ಹುದ್ದೆಯಲ್ಲಿ ಸಾಮಾಜಿಕ ಸುಧಾರಣೆಗೆ ಗಣನೀಯ ಕೊಡುಗೆ ನೀಡಿದ್ದಾರೆ” ಎಂದು ಹೇಳಿದರು.
ಬಹ್ರೇನ್ ಇಂಡಿಯನ್ ಸೊಸೈಟಿ(BIS)ಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಜುಮಾ, ಖಾದರ್ ಅವರನ್ನು ಸ್ವಾಗತಿಸಿದರು. ಬಹರೈನ್ ನಲ್ಲಿ ಉದ್ಯಮಿಗಳಿಗೆ ಇರುವ ಪೂರಕ ವಾತಾವರಣದ ಕುರಿತು ಹೇಳಿದ ಅವರು ಅಲ್ಲಿ ಉದ್ಯಮ, ಹೂಡಿಕೆ ಹೆಚ್ಚಳಕ್ಕೆ ಸಹಕರಿಸುವಂತೆ ಸ್ಪೀಕರ್ ಖಾದರ್ ಅವರನ್ನು ವಿನಂತಿಸಿದರು.
ಯು.ಟಿ ಖಾದರ್ ಅವರು ಬಹರೈನ್ ಇಂಡಿಯಾ ಸೊಸೈಟಿ(BIS)ಯ ಕೊಡುಗೆಗಳನ್ನು ಶ್ಲಾಘಿಸಿದರು. ಬಹರೈನ್ ನಲ್ಲಿರುವ ಭಾರತೀಯರು ಹಾಗೂ ಕನ್ನಡಿಗರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ, ಕೈಗಾರಿಕೆಗೆ ಬೇಕಾದಷ್ಟು ಅವಕಾಶ ಗಳಿವೆ. ಹೂಡಿಕೆಗೆ ಪೂರಕ ವಾತಾವರಣ ವಿದೆ. ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬಂದರೆ ಸರಕಾರದಿಂದ ಎಲ್ಲ ಸಹಕಾರದ ಭರವಸೆ ನೀಡಿದರು.
ಬಹರೈನ್ ಇಂಡಿಯಾ ಸೊಸೈಟಿ ಹಾಗೂ ಕರ್ನಾಟಕ ಸರಕಾರದ ಉನ್ನತ ಮಟ್ಟದ ನಿಯೋಗಗಳ ಸಭೆ ನಡೆಸುವ ಬಗ್ಗೆಯೂ ಖಾದರ್ ಭರವಸೆ ನೀಡಿದರು.
ರಾಯಭಾರಿ ವಿನೋದ್ ಜೇಕಬ್ ಮಾತನಾಡಿ ಬಹರೈನ್ ನಲ್ಲಿರುವ ಭಾರತೀಯರ ಸಾಧನೆಯನ್ನು ಸ್ಮರಿಸಿದರು. ಎರಡೂ ದೇಶಗಳ ನಡುವೆ ಇರುವ ಬಾಂಧವ್ಯದ ಕುರಿತು ಹೇಳಿದರು.
ವಿನೋದ್ ದಾಸ್ ಅವರು ಧನ್ಯವಾದ ಸಲ್ಲಿಸಿದರು.