ಅರ್ಧಸಂಖ್ಯಾತರಿಗೆ ನೀಡಬೇಕಿದೆ ನ್ಯಾಯ

Update: 2024-08-15 07:16 GMT

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಓಡಿಸುವಿಕೆ ಒಂದು ಸೀಮಿತ ಆಶಯವಾಗಿತ್ತು. ಆದರೆ ಮನುವಾದ, ಜಾತಿವಾದ ಮತ್ತು ಮನುಷ್ಯ ನಿರ್ಮಿತ ಶೋಷಣೆಯ ತೊಲಗಿಸುವಿಕೆ ಅದರ ವಿಶಾಲವಾದ ಅಂತರ್ಗತ ಆಶಯವಾಗಿತ್ತು. ಅದರಲ್ಲಿ ಲಿಂಗಾಧಾರಿತ ಶೋಷಣೆಯ ನಿರ್ಮೂಲನವೂ ಒಂದು.

ವಿಶ್ವಸಂಸ್ಥೆ ಹೊರಡಿಸಿದ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (17ಎಸ್‌ಡಿಜಿಗಳು) ಗುರಿ 5 ಕೂಡಾ ಸ್ಪಷ್ಟವಾಗಿ ಲಿಂಗತಾರತಮ್ಯತೆ ಕೊನೆಗೊಳಿಸಿ ಸರ್ವರಿಗೂ ನ್ಯಾಯಯುತವಾದ ಬದುಕನ್ನು ನೀಡುವ ಬಗ್ಗೆ ಹೇಳುತ್ತದೆ.

2015ರಲ್ಲಿ ಭಾರತವೂ ಸೇರಿದಂತೆ ಎಲ್ಲಾ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡಿದ್ದು 2030ರ ಒಳಗೆ ತಾವು ಇದನ್ನು ಪೂರ್ಣಗೊಳಿಸುವುದಾಗಿ ಸಂಕಲ್ಪ ಮಾಡಿವೆ.

ಈ ಸಂಕಲ್ಪ ಮತ್ತು ಭಾರತದ ಸ್ವಾತಂತ್ರ್ಯ ಆಚರಣೆಯ ಹಿನ್ನೆಲೆಯಲ್ಲಿ ಸ್ವಾತಂತ್ರ್ಯವು ಇಲ್ಲಿನ ಅರ್ಧಸಂಖ್ಯಾತ ಮಹಿಳೆಯರ ಬಾಳಿನಲ್ಲಿ ನಿಜ ಸ್ವಾತಂತ್ರ್ಯವನ್ನು ತಂದಿದೆಯೇ ಎಂಬ ಪ್ರಶ್ನೆಯನ್ನು ಮುಂದಿಡುತ್ತದೆ. ಅಭಿವೃದ್ಧಿಗೂ ಸ್ವಾತಂತ್ರ್ಯಕ್ಕೂ ಅವಿನಾಭಾವ ಸಂಬಂಧ. ಅದಿಲ್ಲದೆ ಇದಿರದು, ಇದಿಲ್ಲದೆ ಅದಿರದು.

ಈ ನಿಟ್ಟಿನಲ್ಲಿ ಕೆಲವೊಂದು ಮೂಲಭೂತ ಸೂಚಕಗಳಲ್ಲಿ ಮಹಿಳೆ ಕ್ರಮಿಸಿದ ದಾರಿಯ ಬಗ್ಗೆ ನೋಡೋಣ.

ಉದ್ಯೋಗ ವಲಯದ ಬಗ್ಗೆ ನೋಡುವುದಾದರೆ ಉದ್ಯೋಗವು ಆರ್ಥಿಕ ಸಬಲೀಕರಣ ಮತ್ತು ಲಿಂಗ ಸಮಾನತೆಗಳನ್ನು ಸಾಧಿಸುವ ಪರಿಣಾಮಕಾರಿ ಸಾಧನವಾಗಿದೆ. ಭಾರತದಲ್ಲಿ ಉದ್ಯೋಗ ಕ್ಷೇತ್ರದಲ್ಲಿನ ಲಿಂಗಸಮಾನತೆ ನಿರೀಕ್ಷಿತ ಮಟ್ಟದ ಬೆಳವಣಿಗೆ ಕಾಣಲಿಲ್ಲ. ವರದಿಗಳ ಪ್ರಕಾರ ಉನ್ನತ ಹುದ್ದೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಳೆದ ದಶಕದಲ್ಲಿ ಕಡಿಮೆಯಾಗಿರುವುದು ಕಂಡುಬಂದಿದೆ.

ಲೇಬರ್ ಬ್ಯೂರೋ 2023ರಲ್ಲಿ ಬಿಡುಗಡೆ ಮಾಡಿದ ಪೀರಿಯೋಡಿಕ್ ಲೇಬರ್ ಫೋರ್ಸ್ ಸರ್ವೇ ಪ್ರಕಾರ 2017-18ರಲ್ಲಿ ಮಹಿಳಾ ಭಾಗವಹಿಸುವಿಕೆ ಶೇ. 23.3 ಇದ್ದಿದ್ದು 2022-23ರಲ್ಲಿ 37ಕ್ಕೆ ಏರಿದೆ.

ಆದರೆ ಈ ಏರಿಕೆಯ ಬಗ್ಗೆ ಸಂತಸಪಡುವುದಕ್ಕಿಂತ ಮುಂಚೆ, ಮಹಿಳಾ ಭಾಗವಹಿಸುವಿಕೆಗೆ ಸಂಬಂಧಿಸಿದ ಯಾವ ಮ್ಯಾಜಿಕ್ ಈ ದಿನಗಳಲ್ಲಿ ನಡೆಯಿತು ಎಂದು ಸೂಕ್ಷ್ಮವಾಗಿ ನೋಡಿದರೆ ಒಳನೋಟಗಳು ದಿಗಿಲಿನಿಂದ ಕೂಡಿರುವಂತಹದ್ದು. ಈ ಹೆಚ್ಚಳವು ಪಾಸಿಟಿವ್ ಬದಲಾವಣೆಯಾಗಿ ಬರಲಿಲ್ಲ.

ಯಾಕೆಂದರೆ ಆ ಅವಧಿಯಲ್ಲಿ ಈ ಹೆಚ್ಚಳಕ್ಕೆ ಕಾರಣ ನೋಟ್ ಬ್ಯಾನ್ ಮತ್ತು ಕೊರೋನ ತಂದಿಟ್ಟ ಗಂಡಾಂತರದಿಂದಾಗಿ ಮಹಿಳೆಯರು ತಮ್ಮ ಕುಟುಂಬ ರಕ್ಷಣೆಯ ಸಲುವಾಗಿ ಅನಿವಾರ್ಯವಾಗಿ ದುಡಿಮೆಗಿಳಿಯಬೇಕಾಯಿತು ಎನ್ನುವುದು ಸ್ಪಷ್ಟ.

ಉನ್ನತ ಹುದ್ದೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಅದೇ ಪ್ರಮಾಣದಲ್ಲಿ ನಡೆದಿದ್ದರೆ ಅದು ಅಪೇಕ್ಷಣೀಯ ಬದಲಾವಣೆ ಆಗಿರುತ್ತಿತ್ತು.

ಆರೋಗ್ಯ ಕ್ಷೇತ್ರಕ್ಕೆ ಬಂದರೆ ಭಾರತದಲ್ಲಿ ಶೇ. 24ರಷ್ಟು ಮಹಿಳೆಯರು ಅಪೌಷ್ಟಿಕತೆಯಿಂದ ಮತ್ತು ಶೇ. 54 ಮಹಿಳೆಯರು ರಕ್ತದ ಕೊರತೆಯಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸೌಖ್ಯದಿಂದ ಇರುವುದೇ ಆರೋಗ್ಯವಂತಿಕೆ ಹೊರತು ಬರಿದೇ ಕಾಯಿಲೆ ಇಲ್ಲ ಎಂದ ಮಾತ್ರಕ್ಕೆ ಆರೋಗ್ಯವಂತರು ಎಂದರ್ಥವಲ್ಲ. ಈ ವ್ಯಾಖ್ಯಾನದ ಬೆನ್ನು ಹತ್ತಿ ಹೋಗುವುದಾದರೆ ಭಾರತದಲ್ಲಿ ಮಹಿಳೆಯರ ಆರೋಗ್ಯದ ಸ್ಥಿತಿಯ ಬಗ್ಗೆ ಓದುಗರೇ ಅಂದಾಜು ಲೆಕ್ಕ ಹಾಕಬೇಕು.

ಕ್ರೀಡಾ ಕ್ಷೇತ್ರದಲ್ಲಿ ಪುರುಷ ಪ್ರಾಧಾನ್ಯತೆಯ ಅಹಮಿಕೆ ಮಹಿಳೆಯರನ್ನು ಯಾವ ರೀತಿ ಹಣಿಯುತ್ತಿದೆ, ಯಾವ ರೀತಿಯಲ್ಲಿ ನ್ಯಾಯದ ಕೇಳುವಿಕೆಗೆ ತಲೆಯೆತ್ತಿದವರನ್ನು ನೆಲಕ್ಕೆ ಕೆಡವಿ ಬಗ್ಗು ಬಡಿಯಲಾಯಿತು ಎನ್ನುವುದನ್ನು ಇತ್ತೀಚೆಗಷ್ಟೇ ಇಡೀ ದೇಶವೇ ವಿಷಾದದಿಂದ ನೋಡಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಕಳೆದುಕೊಂಡ ವಿನೇಶ್ ಫೋಗಟ್‌ರ ಹೃದಯಕ್ಕೆ ಮೆತ್ತಿದ ದುಃಖವು ನೂರುಕತೆಗಳನ್ನು ಹೇಳುತ್ತಿವೆ.

ಪ್ರಾತಿನಿಧ್ಯದ ವಿಚಾರಕ್ಕೆ ಬರುವುದಾದರೆ ತೀರ್ಪು ನೀಡುವಲ್ಲಿ ಎಷ್ಟು ಮಹಿಳೆಯರು ಕೂತಿದ್ದಾರೆ ಎನ್ನುವುದು ಗಮನಾರ್ಹ. ಈ ನಿಟ್ಟಿನಲ್ಲಿ ನೋಡುವುದಾದರೆ ನ್ಯಾಯಾಂಗದಲ್ಲಿ ಉನ್ನತ ಹಂತದ ಬಾರ್ ಅಸೋಸಿಯೇಷನ್‌ಗಳಲ್ಲಿ ಸುಮಾರು ಶೇ. 90ರಷ್ಟು ಪುರುಷರೇ ತುಂಬಿಕೊಂಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರುಷಗಳು ಕಳೆದರೂ ಸುಪ್ರೀಂ ಕೋರ್ಟ್‌ನ ಪ್ರಥಮ ಮಹಿಳಾ ಮುಖ್ಯ ನ್ಯಾಯಾಧೀಶೆ (ರೋಸ್ಟರ್ ಪ್ರಕಾರ 2027ರ ಸೆಪ್ಟಂಬರ್ 25ರಂದು ಜಸ್ಟಿಸ್ ನಾಗರತ್ನಾ ಮುಖ್ಯನ್ಯಾಯಾಧೀಶೆಯಾಗುತ್ತಾರೆ) ಬರಲು ಇನ್ನೂ ಮೂರು ವರ್ಷ ಕಾಯಬೇಕಿದೆ.

ಗಂಡು ಭಾಷೆಯ, ದರ್ಪದ ಬಾಡಿಲಾಂಗ್ವೇಜ್‌ನ ಪೊಲೀಸ್ ಇಲಾಖೆಯ ತಾಯೀಕರಣ ಮಾಡಬೇಕಿರುವುದು ಈ ಹೊತ್ತಿನ ತುರ್ತು. ಆದರೆ ಅಲ್ಲಿ ಮಹಿಳೆಯರ ಭಾಗವಹಿಸುವಿಕೆ ಇರುವುದು ಶೇ. 11.75 ಮಾತ್ರ. ಅಲ್ಲಿ ಮಹಿಳೆಯರೇ ಸ್ವತಃ ಅನೇಕ ರೀತಿಯ ವೃತ್ತಿಸಂಬಂಧಿತ ಕಿರುಕುಳಗಳನ್ನು ಅನುಭವಿಸುತ್ತಲೇ ಇರುವುದು ವಾಸ್ತವ.

ಮಾಧ್ಯಮ ರಂಗದಲ್ಲಿ ಮಹಿಳೆಯರ ಪ್ರಮಾಣ ಸುಮಾರು ಶೇ. 25ರಷ್ಟಿದೆ. ಆದರೆ ಮಹಿಳೆಯನ್ನು ಸ್ವತಂತ್ರವಾಗಿ, ಶಕ್ತವಾಗಿ ಡಿಬೇಟ್‌ಗೆ ಕೂರಿಸದೆ ತನ್ನ ಪಕ್ಕದಲ್ಲಿ ಉಲಿಯುವ ಮಹಿಳೆಯಾಗಿ ಕೆಲವು ಚಾನೆಲ್‌ಗಳು ಬಳಸುತ್ತಲೇ ಬಂದಿವೆ.

ಇವೆಲ್ಲವನ್ನು ಹಳಿಗೆ ತರುವತ್ತ ಸರಕಾರದ ಪಾತ್ರವೇನು ಎನ್ನುವುದನ್ನು ನೋಡುತ್ತಾ ಹೋದರೆ ಭಾರತದಲ್ಲಿ ಒಕ್ಕೂಟ ಸರಕಾರವು ಲಿಂಗತಾರತಮ್ಯವನ್ನು ತೊಡೆದುಹಾಕಲು ಹಲವು ಕ್ರಮಗಳನ್ನು ಕೈಗೊಂಡಿದೆಯಾದರೂ ತನ್ನ ಜನಪ್ರಿಯ ಸ್ಲೋಗನ್ ಆದ ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯಡಿ ಸರಕಾರ ಮೀಸಲಿಟ್ಟ ಶೇ. 80ರಷ್ಟು ಹಣವನ್ನು ಮಾಧ್ಯಮ ಪ್ರಚಾರಕ್ಕೆ ವ್ಯಯಿಸಲಾಗಿದೆ ಎಂದು ‘ಮಹಿಳಾ ಸಬಲೀಕರಣ’ ಕುರಿತು ರಚಿಸಲಾಗಿರುವ ಸಂಸದೀಯ ಸಮಿತಿ ತನ್ನ ವರದಿಯಲ್ಲಿ ಹೇಳಿದೆ. ಈ ಮೂಲಕ ಮಹಿಳೆ ಇವರಿಗೆ ಕ್ಷುದ್ರ ರಾಜಕಾರಣದ ಜಾಹೀರಾತಿನ ಸರಕು ಎನ್ನುವುದು ಬಯಲಾಗಿದೆ.

ಕರ್ನಾಟಕ ಸರಕಾರವು ಮಹಿಳಾ ಪ್ರಾತಿನಿಧ್ಯದ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ, ಸ್ತ್ರೀ ಶಕ್ತಿ ಯೋಜನೆ, 2023-24ರ ಲಿಂಗಾಧಾರಿತ ಬಜೆಟ್, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒನ್ ಸ್ಟಾಪ್ ಸೆಂಟರ್, ಸಾಂತ್ವನ ಯೋಜನೆ, ಶಕ್ತಿ ಸದನ, ವಿಶೇಷ ಗ್ರಾಮಸಭೆಗಳು, ಸುರಕ್ಷಾ ಯೋಜನೆ ಇನ್ನಿತರ ಯೋಜನೆಗಳ ಮುಖಾಂತರ ಸ್ತ್ರೀಪರ ಸರಕಾರವಾಗಿ ಮಹಿಳಾ ಪ್ರಾತಿನಿಧ್ಯಕ್ಕೆ ಒತ್ತುನೀಡುತ್ತಿದೆಯಾದರೂ ಅಷ್ಟಕ್ಕೇ ನಿಲ್ಲದೆ, ಇನ್ನಷ್ಟೇ ಹಂಚಿಕೆಯಾಗಬೇಕಿರುವ ತನ್ನ ನಿಗಮಮಂಡಳಿಗಳಲ್ಲಿ, ಆಯೋಗಗಳಲ್ಲಿ ಕನಿಷ್ಠ ಒಬ್ಬ ಮಹಿಳೆಯರಿರಬೇಕು ಎಂಬ ಕಾಟಾಚಾರದ ಲೆಕ್ಕ ಭರ್ತಿ ಮಾಡುವುದು ಬಿಟ್ಟು ಎಲ್ಲಾ ನೇಮಕಾತಿಗಳಲ್ಲಿ ಕನಿಷ್ಠ ಶೇ. 33 ಮಹಿಳೆಯರನ್ನು ನೇಮಿಸಿಕೊಳ್ಳುವ ಮೂಲಕ ಮಹಿಳಾ ಪ್ರಾತಿನಿಧ್ಯದ ತಾತ್ವಿಕತೆಯನ್ನು ಎತ್ತಿಹಿಡಿಯಬೇಕು.

ಒಂದು ಸಮಾಜದಲ್ಲಿರುವ ಸ್ತ್ರೀ-ಪುರುಷ ಸಂಬಂಧ ಎಷ್ಟು ಆರೋಗ್ಯಕರವಾಗಿದೆ ಎನ್ನುವುದು, ಮಾನವನು ತನ್ನ ಪಶು ಮನಸ್ಥಿತಿಯಿಂದ ಮನುಷ್ಯನಾಗುವತ್ತ ಎಷ್ಟು ಸಾಗಿದ್ದಾನೆ ಎನ್ನುವುದರ ಅಳತೆಗೋಳಾಗಿದೆ ಎಂದು ಕಾರ್ಲ್‌ಮಾರ್ಕ್ಸ್ ಹೇಳುತ್ತಾರೆ. ಇದು ಕುಟುಂಬಕ್ಕೂ, ಸಮಾಜಕ್ಕೂ, ಸರಕಾರಗಳಿಗೂ ಸದಾಕಾಲ ಅನ್ವಯವಾಗುತ್ತದೆ. ಸದಾ ತನ್ನ ಸುತ್ತಲಿನ ಪುರುಷಾಹಂಕಾರದ ಠೇಂಕಾರದಲ್ಲಿ, ಜಾತಿಧರ್ಮಗಳ ಕೊಳೆತ ಚಿಂತನೆಗಳ ಕೆಸರಿನಲ್ಲಿ, ಸಮಾಜ ಹೇರಿದ ಅನ್ಯಾಯದ ಕಟ್ಟಳೆಗಳ ಜೇಡರ ಬಲೆಯಲ್ಲಿ ಸಿಕ್ಕಿ ಸುಳಿದಾಡುತ್ತಿರುವ ಮಹಿಳೆ ಎಲ್ಲವನ್ನೂ ತೊಡೆದು ಮುಂದೆ ಬರುವುದು ಕಷ್ಟ ಸಾಧ್ಯ. ಹೀಗಿರುವಾಗ ಮಹಿಳೆಯ ಬಗೆಗಿನ ಆ ಸ್ಥಾಪಿತ ಭಾವದ ಮೂರ್ತಿಭಂಜನೆ ಆಗಬೇಕಿದ್ದರೆ ಸರಕಾರಗಳು ಹೆಚ್ಚುಹೆಚ್ಚು ಮಹಿಳೆಯರ ಕೈಗೆ ಅಧಿಕಾರ ನೀಡಬೇಕು.

ರಾಜಕೀಯ ಅಧಿಕಾರವೇ ಪರಮಾಧಿಕಾರ ಎಂಬ ಅಂಬೇಡ್ಕರ್ ಅವರ ಮಾತನ್ನು ಸ್ಮರಿಸುತ್ತಲೇ ರಾಜಕೀಯ ಪ್ರಾತಿನಿಧ್ಯದ ಕಡೆಗೆ ಕಣ್ಣು ಹಾಯಿಸಿದರೆ ಪರಿಸ್ಥಿತಿ ನಿರುತ್ತೇಜನಕಾರಿಯಾಗಿದೆ.

ಪ್ರಸಕ್ತ 18ನೇ ಲೋಕಸಭೆಯಲ್ಲಿ 469 ಪುರುಷರಿದ್ದರೆ ಮಹಿಳೆಯರ ಸಂಖ್ಯೆ 74. ಅಂದರೆ ಮಹಿಳೆಯರ ಪ್ರಮಾಣ ಶೇ. 13.6 ಮಾತ್ರ. ಕಳೆದ 2019ರ ಲೋಕಸಭೆಯಲ್ಲಿ 78(ಶೇ. 14.7) ಮಂದಿ ಇದ್ದರು. ಶೇ. 48 ಮಹಿಳಾ ಮತದಾರರು ಇರುವ ದೇಶದಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕಳವಳಕಾರಿ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 8,360 ಅಭ್ಯರ್ಥಿಗಳಿದ್ದರು. ಅದರಲ್ಲಿ ಮಹಿಳೆಯರ ಪ್ರಮಾಣ ಶೇ. 10. ಪುರುಷರಷ್ಟೇ ಪ್ರಮಾಣದಲ್ಲಿ ಮಹಿಳೆಯರು ಸುಮಾರು ಶೇ. 66ರಷ್ಟು ಮತದಾನ ಮಾಡಿದ್ದಾರಾದರೂ 150 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳೇ ಇರಲಿಲ್ಲ.

ರಾಜ್ಯ ಶಾಸನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ನೋಡುವುದಾದರೆ ರಾಜ್ಯ ವಿಧಾನಸಭೆಗಳಲ್ಲಿ ರಾಷ್ಟ್ರೀಯ ಸರಾಸರಿಯ ಕೇವಲ ಶೇ. 9ರಷ್ಟಿದೆ. ಯಾವುದೇ ರಾಜ್ಯವು ಶೇ. 20ಕ್ಕಿಂತ ಹೆಚ್ಚು ಮಹಿಳಾ ಶಾಸಕರನ್ನು ಹೊಂದಿಲ್ಲ.ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿರುವ ರಾಜ್ಯವಾದ ಛತ್ತೀಸ್‌ಗಡದಲ್ಲಿ ಕೂಡಾ ಕೇವಲ ಶೇ. 18 ಮಹಿಳಾ ಶಾಸಕರಿದ್ದಾರೆ. ಸಂಸತ್ತಿನ ಕೆಳಮನೆಯಲ್ಲಿ ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ ಭಾರತವು 185 ದೇಶಗಳಲ್ಲಿ 143ನೇ ಸ್ಥಾನದಲ್ಲಿದೆ.

ಜಾಗತಿಕ ಸನ್ನಿವೇಶದ ಕಡೆಗೆ ಕಣ್ಣುಹಾಯಿಸುವುದಾದರೆ ಯುನೈಟೆಡ್ ಕಿಂಗ್‌ಡಂನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸಾರ್ವತ್ರಿಕ ಚುನಾವಣೆಗಳಲ್ಲಿ ಹೌಸ್ ಆಫ್ ಕಾಮನ್ಸ್‌ನಲ್ಲಿ ಶೇ. 40 ಮಹಿಳೆಯರು ಇದ್ದಾರೆ. ಸ್ವೀಡನ್

ಶೇ. 46 ಮಹಿಳಾ ಸಂಸದರನ್ನು ಹೊಂದಿದೆ, ದಕ್ಷಿಣ ಆಫ್ರಿಕಾ ಶೇ. 45, ಯುಕೆ

ಶೇ. 40 ಮತ್ತು ಯುಎಸ್ ಶೇ. 29 ಮಹಿಳಾ ಸಂಸದರನ್ನು ಹೊಂದಿದೆ.

ಲಿಂಗ ಪ್ರಾತಿನಿಧ್ಯದಲ್ಲಿ ಭಾರತವು ವಿಯೆಟ್ನಾಂ, ಫಿಲಿಪ್ಪೀನ್ಸ್, ಪಾಕಿಸ್ತಾನ ಮತ್ತು ಚೀನಾದಂತಹ ದೇಶಗಳಿಗಿಂತ ಹಿಂದುಳಿದಿರುವುದು ಆಘಾತಕಾರಿ.

73ನೇ ಮತ್ತು 74ನೇ ಸಾಂವಿಧಾನಿಕ ತಿದ್ದುಪಡಿಗಳು (1992/1993) ಪಂಚಾಯತ್‌ಗಳು ಮತ್ತು ಪುರಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಮೀಸಲಿಡಲು ತಿಳಿಸಿದ ಕಾರಣ ಸ್ಥಳೀಯ ಆಡಳಿತದಲ್ಲಿ ಅವರ ಭಾಗವಹಿಸುವಿಕೆಯು ಹೆಚ್ಚಿಸಿತಾದರೂ, ಮಹಿಳಾ ಭಾಗವಹಿಸುವಿಕೆ ಒಂದೋ ಮೀಸಲಾತಿಯನ್ನು ತುಂಬುವ ದಾಳವಾಗಿ ಅಥವಾ ಅವಳ ಪತಿ ಅಥವಾ ತಂದೆಗೆ ಇದ್ದ ಓಟುಬ್ಯಾಂಕನ್ನು ಬಿಟ್ಟುಕೊಡಲು ಬಾರದ ತಂತ್ರಗಾರಿಕೆಯ ಫಲವಾಗಿ ರಾಜಕಾರಣದಲ್ಲಿರುವುದೇ ಹೆಚ್ಚು.

ನಂತರದಲ್ಲಿ 106ನೇ ಸಾಂವಿಧಾನಿಕ ತಿದ್ದುಪಡಿ(2023)ಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸೀಟುಗಳ ಮೀಸಲಾತಿಯನ್ನು ಪ್ರಸ್ತಾವಿಸುತ್ತದೆಯಾದರೂ ಅದರ ಅನುಷ್ಠಾನ ಮುಗಿಲ ಮಲ್ಲಿಗೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಯು.ಟಿ. ಫರ್ಝಾನಾ

contributor

Similar News