ಲೈಂಗಿಕ ಹಗರಣ | ಮಹಿಳೆಯರ ಘನತೆ ಕುಗ್ಗಿಸುತ್ತಿರುವ ಮೀಮ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ದೂರು

Update: 2024-05-04 18:13 GMT

ಹಾಸನ : ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂತಹ, ಮಹಿಳೆಯರ ಘನತೆಗೆ ಕುಂದು ಉಂಟಾಗುವಂತಹ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ. ಈ ವಿಡಿಯೋಗಳನ್ನು ತಯಾರಿಸಿದವರು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದವರ ವಿರುದ್ದ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಪೊಲೀಸ್ ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

 ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣವು ಪೆನ್‌ಡ್ರೈವ್‌ಗಳ ಮೂಲಕ ಬಹಿರಂಗವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಈ ವಿಷಯವನ್ನು ಬಳಸಿಕೊಂಡು ಕಿಡಿಗೇಡಿಗಳು ವ್ಯಂಗ್ಯದ ವಿಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ವಿಡಿಯೋಗಳು ಲೈಂಗಿಕ ಹಗರಣವನ್ನು ಗೌಣ ಮಾಡಿ, ಅತ್ಯಚಾರದಂತಹ ಅಪರಾಧವನ್ನು ಹಾಸ್ಯದ ಸರಕಾಗಿ ಬದಲಾಯಿಸುತ್ತಿವೆ.

ಇದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ. ಸಂತ್ರಸ್ತರನ್ನು ಲಘುವಾಗಿ ನೋಡುವುದಲ್ಲದೆ, ಹಾಸನ ಜಿಲ್ಲೆಯ ಎಲ್ಲ ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವಂತಿದೆ. ಇದು ಸಂತ್ರಸ್ತರಿಗೆ ಎಲ್ಲ ಮಹಿಳೆಯರಿಗೆ ಹಾಗೂ ಕುಟುಂದವರಿಗೆ ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ. ಮತ್ತು ಸಂತ್ರಸ್ತರು ಮುಂದೆ ಬಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಲು ಹಿಂಜರಿಯುವಂತೆ ಮಾಡಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಡಿಯೋಗಳನ್ನು ತಯಾರಿಸಿದವರು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದವರ ವಿರುದ್ದ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ, ಎಚ್.ಆರ್. ನವೀನ್‌ಕುಮಾರ್, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಜಿಲ್ಲಾಧ್ಯಕ್ಷ, ಎಂ.ಜಿ.ಪೃಥ್ವಿ, ಭಾರತ ವಿದ್ಯಾರ್ಥಿ ಫೆಡರೇಷನ್  ಜಿಲ್ಲಾ ಕಾರ್ಯದರ್ಶಿ ವಿ.ರಮೇಶ್ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News