ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ | ಎಸ್.ಐ.ಟಿ.ಯಿಂದ ಮೂರು ಕಡೆ ದಾಳಿ

Update: 2024-05-14 16:56 GMT

ಹಾಸನ : ಅಶ್ಲೀಲ ವಿಡಿಯೋಗಳ ಹಂಚಿಕೆ ಪ್ರಕರಣ ದಿನೆ ದಿನೇ ತಿರುವು ಪಡೆಯುತ್ತಿದ್ದು, ಬಿಜೆಪಿ ಮುಖಂಡ ಹಾಗೂ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರ ಮನೆ, ಕಚೇರಿ ಸೇರಿದಂತೆ ಮೂರು ಕಡೆ ಎಸ್.ಐ.ಟಿ. ತಂಡ ಮಂಗಳವಾರ ಸಂಜೆ ದಾಳಿ ನಡೆಸಿದೆ.

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದಲ್ಲಿ ಪ್ರೀತಂಗೌಡ ಆಪ್ತ ಎನ್ನಲಾದ ಶರತ್ ಎಂಬವರ ಒಡೆತನದ ಬಾರ್ ಹಾಗೂ ಕಿರಣ್ ಎಂಬವರ ಒಡೆತನದ ಹೋಟೆಲ್ ಮೇಲೆ ದಾಳಿ ಮಾಡಲಾಗಿದೆ.

ಹಾಸನ ನಗರದ ಬಿ.ಎಂ.ರಸ್ತೆಯಲ್ಲಿರುವ ಬಾರ್ ಹಾಗೂ ಹೋಟೆಲ್ ಶ್ರೀಕೃಷ್ಣ ಮೇಲೆ ಎಸ್.ಐ.ಟಿ. ತಂಡವು ದಾಳಿ ನಡೆಸಿ ಕಂಪ್ಯೂಟರ್ ನಲ್ಲಿ ಸೇವ್ ಮಾಡಿರುವ ಡಿಸ್ಕ್ ನ್ನು ಪರಿಶೀಲಿಸುತ್ತಿದೆ. ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಕ್ವಾಲಿಟಿ ಬಾರ್ ನ ಶರತ್ ವಿರುದ್ದ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾಗಿದ್ದರೂ ಶರತ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸದ್ದಾರೆ. ಇನ್ನು ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಿರಣ್ ಎಂಬವರ  ಒಡೆತನಕ್ಕೆ ಸೇರಿರುವ ಬಾರ್ ಹಾಗೂ ಹೋಟೆಲ್‌ನಲ್ಲಿ ಎಸ್‌ಐಟಿ ತಲಾಶ್ ನಡೆಸುತ್ತಿದೆ. ಇನ್ನು ಬಿಜೆಪಿ ಮುಖಂಡ ಪುನಿತ್ ಅವರ ಒಡೆತನಕ್ಕೆ ಸೇರಿದ ಕಛೇರಿ, ಮನೆ ಕೂಡ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News