ನಾವು, ಮೋದಿಯವರಂತೆ ಭಾರತೀಯರನ್ನು ನಂಬಿಸಿ ದ್ರೋಹ ಬಗೆಯಲ್ಲ: ಸಿದ್ದರಾಮಯ್ಯ

Update: 2024-04-19 10:12 GMT

ಹಾಸನ (ಬೇಲೂರು) , ಎ.19: ನಾವು ಪ್ರಧಾನಿ ಮೋದಿಯವರಂತೆ ಭಾರತೀಯರನ್ನು ನಂಬಿಸಿ ದ್ರೋಹ ಬಗೆಯಲ್ಲ. ನಂಬಿಕೆ ದ್ರೋಹ ಮಾಡಲ್ಲ. ನುಡಿದಂತೆ ನಡೆದು ತೋರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಎಂ. ಪಟೇಲ್ ಪರವಾಗಿ ನಡೆದ 'ಪ್ರಜಾಧ್ವನಿ-2 ಯಾತ್ರೆ'ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಾವು ಕೇವಲ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ಬಕ್ರಾ ಮಾಡುವುದಿಲ್ಲ. ನಿಮ್ಮ ಬದುಕಿನ ಸಂಕಷ್ಟಗಳ ಜತೆಗೆ ನಿಲ್ಲುತ್ತೇವೆ ಎಂದರು.

ರಾಜ್ಯಕ್ಕೆ ಬಿಜೆಪಿ ಮಾಡುತ್ತಿರುವ ಅನ್ಯಾಯದ ಬಗ್ಗೆ ಪ್ರಜ್ವಲ್ ರೇವಣ್ಣ, ದೇವೇಗೌಡರು ನೆಪಕ್ಕೂ ಪಾರ್ಲಿಮೆಂಟಿನಲ್ಲಿ ಧ್ವನಿ ಎತ್ತಿಲ್ಲ ಏಕೆ ಎಂದು ಸಿಎಂ ಪ್ರಶ್ನಿಸಿದರು.

ನಿರ್ಮಲಾ ಸೀತಾರಾಮನ್ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಕೊಡುವುದಾಗಿ ಬಜೆಟ್ ನಲ್ಲಿ ಘೋಷಿಸಿದರು. ಆದರೆ ಇದುವರೆಗೂ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡದೆ ವಂಚಿಸಿದ್ದಾರೆ. ಈ ವಂಚನೆಯನ್ನು ಪ್ರಶ್ನಿಸುವುದನ್ನು ಬಿಟ್ಟ ಜೆಡಿಎಸ್ ನವರು ಹೋಗಿ ಬಿಜೆಪಿ ಜತೆಗೇ ಜಮೆಯಾಗಿದ್ದಾರೆ. ಇದು ಪ್ರಜ್ವಲ್ ರೇವಣ್ಣ ಅವರು ತಮಗೆ ಮತ ಹಾಕಿದವರಿಗೆ ಮಾಡಿದ ದ್ರೋಹ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದಿದ್ದ ಮೋದಿಯವರನ್ನು ನೀವೂ ನಂಬಿದ್ರಿ. ಭಾರತೀಯರೆಲ್ಲರೂ ನಂಬಿದ್ರು. ಆದರೆ, ಉದ್ಯೋಗ ಕೊಡಿ ಅಂದಾಗ, ಹೋಗಿ ಪಕೋಡ ಮಾರಾಟ ಮಾಡಿ ಅಂದ್ರು. ಇದು ವಿದ್ಯಾವಂತ ಯುವಕ/ ಯುವತಿಯರಿಗೆ ಮೋದಿ ಮಾಡಿದ ನಂಬಿಕೆ ದ್ರೋಹ ಅಲ್ಲವೇ? ಭಾರತೀಯರಿಗೆ ಮಾಡಿದ ವಂಚನೆ ಅಲ್ಲವೇ ಎಂದು ಪ್ರಶ್ನಿಸಿದರು.

ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದ ಮೋದಿ ಸರ್ಕಾರ ಪ್ರತಿಭಟನಾನಿರತ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಮಹಾದ್ರೋಹ ಅಲ್ಲವೇ? ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿದ ರೈತರ ಮೇಲೆ ಬಿಜೆಪಿ ನಡೆಸಿದ ದೌರ್ಜನ್ಯ ಒಂದಾ ಎರಡಾ? ಈಗ ಆ ದೌರ್ಜನ್ಯಗಳಿಗೆ ತಕ್ಕ ಪಾಠ ಕಲಿಸುವ ಸಂದರ್ಭ ಬಂದಿದೆ ಎಂದರು.

ಮೋದಿ ಅವರ ದರ್ಬಾರ್ ನಲ್ಲಿ ಆದ ಬೆಲೆ ಏರಿಕೆಯಿಂದ ಬಸವಳಿದಿದ್ದ ರಾಜ್ಯದ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ನಾವು ಐದು ಗ್ಯಾರಂಟಿಗಳನ್ನು ರೂಪಿಸಿದೆವು. ಜಾರಿ ಮಾಡಿದೆವು. ನಾನು ನುಡಿದಂತೆ ನಡೆದಂತೆ ನಡೆದಿದ್ದೇವೆ. ಮೋದಿಯವರಂತೆ ಭಾರತೀಯರನ್ನು ನಾವು ನಂಬಿಸಿ ದ್ರೋಹ ಬಗೆಯಲ್ಲ ಎಂದು ಸ್ಪಷ್ಟವಾಗಿ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News