ವಕ್ಪ್ ವಿವಾದ | ಹಾವೇರಿಯ ಕಡಕೋಳಿನಲ್ಲಿ ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ : 37 ಜನರ ಬಂಧನ
ಹಾವೇರಿ : ಇಲ್ಲಿನ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಖಾತೆ ಇಂದೀಕರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮನೆಗಳ ಖಾತಾ ದಾಖಲೆಗಳಲ್ಲಿ ʼವಕ್ಪ್ ಆಸ್ತಿʼ ಎಂದು ನಮೂದು ಮಾಡಲಾಗುತ್ತಿದೆ ಎಂಬ ವದಂತಿಯಿಂದ ಉದ್ರಿಕ್ತರ ಗುಂಪೊಂದು ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ಮುಸ್ಲಿಂ ಮುಖಂಡ ಮುಹಮ್ಮದ್ ರಫಿ ಎಂಬುವರ ಮನೆ ಮೇಲೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದೆ. ಮನೆ ಮುಂದೆ ಇದ್ದ ಬೈಕ್ ಅನ್ನು ಜಖಂಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಉದ್ರಿಕ್ತರ ಗುಂಪು ಕೆಲ ಮುಸ್ಲಿಂ ಮುಖಂಡರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ, 5 ಮಂದಿ ಗಾಯಗೊಂಡಿದ್ದಾರೆ. ಕಡಕೋಳ ಗ್ರಾಮದ ಮುಹಮ್ಮದ್ ರಫಿ ಎಂಬವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಹುಬ್ಬಳ್ಳಿ ಕಿಮ್ಸ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಲ್ಲು ತೂರಾಟದಿಂದ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ, ಬುಧವಾರ ರಾತ್ರಿ ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಎಸ್ಪಿ ಅಂಶುಕುಮಾರ್ ಅವರು ಕಡಕೋಳ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ, ಮತ್ತೆ ಈ ರೀತಿಯ ಘಟನೆ ನಡೆಯದಂತೆ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಗಲಾಟೆಗೆ ಕಾರಣರಾದವರನ್ನು ಬಂಧಿಸಲು ಹಾಗೂ ಗಲಾಟೆಗೆ ಪ್ರಚೋದನೆ ನೀಡಿದರನ್ನೂ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಈ ಸಂಬಂಧ 37 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮದಲ್ಲಿ ಬಿಗಿ ಭದ್ರತೆಗೆ 4 ಕೆಎಸ್ಆರ್ಪಿ ತುಕಡಿ, 200 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಸುಮಾರು 70 ಮುಸ್ಲಿಂ ಕುಟುಂಬಗಳು ಗ್ರಾಮವನ್ನೇ ತೊರೆದಿವೆ ಎನ್ನಲಾಗಿದೆ. ಗಲಾಟೆಯ ಸಂದರ್ಭದಲ್ಲಿ ಹಲವು ಮುಸ್ಲಿಮರ ಮನೆಗಳನ್ನೇ ಗುರಿಯಾಗಿರಿಸಿಕೊಂಡು ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು, ಮನೆಯ ಕಿಟಕಿಗಳ ಗಾಜುಗಳನ್ನು ಪುಡಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ.