ಶಿಗ್ಗಾಂವಿಯಲ್ಲಿ ಸಮುದಾಯವಾರು ಹಣ ಹಂಚಲು ಕಾಂಗ್ರೆಸ್ ಶಾಸಕರ ನಡುವೆ ಪೈಪೋಟಿ : ಬೊಮ್ಮಾಯಿ ಆರೋಪ

Update: 2024-11-10 07:05 GMT

 ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ : ʼಶಿಗ್ಗಾಂವಿ ಉಪ ಚುನಾವಣೆಯಲ್ಲಿ ಹಣ ಹಂಚುವುದರಲ್ಲಿ ಕಾಂಗ್ರೆಸ್ ನಾಯಕರ ನಡುವೆ ಪೈಪೋಟಿ ಶುರುವಾಗಿದೆ‌ʼ ಎಂದು  ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼಸಮುದಾಯವಾರು ಶಾಸಕರು ಹಣ ಹಂಚಿಕೆ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಹಂಚುವುದನ್ನು ನೋಡಿರಲಿಲ್ಲ‌. ಸರಕಾರದಿಂದ ಲೂಟಿ ಮಾಡಿದ ಹಣವನ್ನು ಇಲ್ಲಿ ಹಂಚುತಿದ್ದಾರೆʼ ಎಂದು ಹೇಳಿದರು.

ಹಾನಗಲ್ ರೈತ ಆತ್ಮಹತ್ಯೆ ಮಾಡಿಕೊಂಡುವುದನ್ನು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಮಾಡುತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ʼರೈತನ ಪಹಣಿಯಲ್ಲಿ ವಕ್ಪ್ ಆಸ್ತಿ ಎಂದು ನಮೂದಾಗಿದೆ. ಅದನ್ನು ತೆಗೆಸಲು ಆ ರೈತ ನಾಲ್ಕೈದು ವರ್ಷ ಅಲೆದಾಡಿದ್ದಾರೆ‌. ವಕ್ಪ್ ಗೆ ಹೋದರೂ ಅಲ್ಲಿ ನ್ಯಾಯ ಸಿಗುವುದಿಲ್ಲ‌ ಅಂತ ಗೊತ್ತಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಅವರ ಕುಟುಂಬದವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬರೆದುಕೊಟ್ಟಿದ್ದಾರೆʼ ಎಂದರು.

ʼರೈತರಿಗೆ ನೊಟಿಸ್ ಕೊಟ್ಟಿರುವುದನ್ನು ವಾಪಸ್ ಪಡೆಯುವುದು ಕಣ್ಣೊರೆಸುವ ತಂತ್ರ. ಎಲ್ಲಿಯವರೆಗೆ ಗೆಜೆಟ್ ನೊಟಿಫಿಕೇಶನ್ ವಾಪಸ್ ಪಡೆಯುವುದಿಲ್ಲವೋ ಅಲ್ಲಿಯವರೆಗೆ ರೈತರಿಗೆ ಯಾವುದೇ ಅನುಕೂಲವಾಗುವುದಿಲ್ಲʼ ಎಂದು ಹೇಳಿದರು.

ಕಾನೂನು ಪ್ರಕಾರ ಪಿಪಿಇ ಕಿಟ್ ಖರೀದಿ :

ಕೋವಿಡ್ ಹಗರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಕೊವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಇರಲಿಲ್ಲ. ಜನ ಸಾಯುತ್ತಿದ್ದರು. ಆರೋಗ್ಯ ತುರ್ತುಪರಿಸ್ಥಿತಿ ಇತ್ತು‌. ವೈದ್ಯರು ಪಿಪಿಇ ಕಿಟ್ ಇಲ್ಲದಿದ್ದರೆ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿದರು. ಪಿಪಿಇ ಕಿಟ್ ಇಲ್ಲದಿದ್ದರೆ ಸಾಯುತ್ತಾರೆ ಎಂಬ ಭಯ ಇತ್ತು. ಆಗ ಎಲ್ಲಿ ಸಿಗುತ್ತವೆ ಎಂದು ತಿಳಿದು ಖರಿದಿ ಮಾಡಿದ್ದೇವು. ಅದು ಕಾನೂನು ಪ್ರಕಾರವೇ ಆಗಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಮೇಲಿನ ಆರೋಪ ಮರೆಮಾಚಲು ವಿರೊಧ ಪಕ್ಷವನ್ನು ದಮನ ಮಾಡಿ, ವಿರೋಧ ಪಕ್ಷದ ನಾಯಕರ ಧ್ವನಿ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News