ಕೋವಿಡ್ ಅಕ್ರಮಗಳ ತನಿಖೆ | ಸರಕಾರದ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ : ಬೊಮ್ಮಾಯಿ
ಹಾವೇರಿ : ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಖರಿಸಿರುವುದನ್ನು ಈ ಸರಕಾರ ತನಿಖೆ ಮಾಡಲು ಮುಂದಾಗಿದೆ. ಏನು ಬೇಕಾದರೂ ತನಿಖೆ ನಡೆಸಲಿ ನಾವು ಎದುರಿಸಲು ಸಿದ್ದರಿದ್ದೇವೆ. ಇಂತಹ ಇನ್ನೂ 10 ತನಿಖೆ ಬರಲಿ, ಸಿದ್ದರಾಮಯ್ಯರ ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.
ರವಿವಾರ ಇಲ್ಲಿನ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ಹುಲಗೂರು, ತಡಸ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ರೈತರ ಪರವಾದ ಸಿಎಂ ಯಾರಾದರೂ ಇದ್ದರೆ ಅದು ನಮ್ಮ ನಾಯಕ ಯಡಿಯೂರಪ್ಪ. ಅವರು ಸಿಎಂ ಆದ ಮೊದಲ ದಿನವೇ ರೈತರ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ನೀಡಿದರು. ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಜಾರಿ ತಂದರು. ಆದರೆ, ಈ ಸರಕಾರ ಆ ಹಣವನ್ನು ಕೊಡಲು ಆಗುತ್ತಿಲ್ಲ ಎಂದು ದೂರಿದರು.
ಶಿಗ್ಗಾಂವಿ ಕ್ಷೇತ್ರದಲ್ಲಿ 5 ಲಕ್ಷದ ಮನೆ ನಿರ್ಮಾಣ ಆಗಲು ಕಾರಣ ಯಡಿಯೂರಪ್ಪ. ಒಂದು ಸಭೆಯಲ್ಲಿ ಅಧಿಕಾರಿಗಳು 5ಲಕ್ಷದ ಮನೆ ನೀಡಲು ಸಾಧ್ಯವಿಲ್ಲವೆಂದು ವಿರೋಧ ಮಾಡಿದ್ದರು. ಆದರೆ, ಯಡಿಯೂರಪ್ಪ 5 ಲಕ್ಷ ಕೊಡಬೇಕು ಎಂದು ಆದೇಶ ಮಾಡಿದರು. ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ವಸತಿ ಸಚಿವ ಝಮೀರ್ ಅಹಮ್ಮದ್ ಶಿಗ್ಗಾಂವಿಗೆ ಒಂದು ಮನೆಯನ್ನಾದರೂ ಕೊಟ್ಟಿದ್ದಿಯಾ, ಇಲ್ಲಿ ಬಂದು ಮತ ಕೇಳಲು ನಿನಗೆ ಯಾವ ನೈತಿಕತೆ ಇದೆ. ನಮ್ಮ ಕ್ಷೇತ್ರಕ್ಕೆ ಬಿಡುಗಡೆ ಮಾಡಿದ್ದ 300ಕೋಟಿ ರೂ. ಹಿಂಪಡೆದಿದ್ದಾರೆ. ಪಕ್ಕದ ಹಾನಗಲ್ ತಾಲೂಕಿನ ಸ್ಥಿತಿ ನೋಡಿ ಧೂಳು ಹಿಡಿದಿವೆ. ಇಲ್ಲಿ ಬೆಳಗಾವಿಯಿಂದ ಬಂದು ಪ್ರಚಾರ ಮಾಡುತ್ತಿದ್ದಾರೆ. ಬೆಳಗಾವಿಗೆ ಯಡಿಯೂರಪ್ಪ 14,500 ಮನೆಗಳನ್ನು ಕಟ್ಟಿಸಿದ್ದಾರೆ. ಬೆಳಗಾವಿಯಿಂದ ಬಂದ ನಾಯಕರು ನಿಮ್ಮ ಕ್ಷೇತ್ರಗಳ ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದರು.