ಸುಳ್ಳು ಹೇಳಿದ ಮೋದಿಯವರಿಗೆ ಮತ ನೀಡಬೇಡಿ : ಸಿಎಂ ಸಿದ್ದರಾಮಯ್ಯ

Update: 2024-04-25 17:37 GMT

Photo : x/@siddaramaiah

ಗದಗ : ಕನ್ನಡ ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸದ ಪ್ರಧಾನಿ ಮೋದಿಯವರಿಗೆ ಲೋಕಸಭಾ ಚುನಾವಣೆ ಬಂದಾಗ ಮಾತ್ರ ಕನ್ನಡಿಗರ ನೆನಪಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಜಿಲ್ಲೆಯ ಗಜೇಂದ್ರಘಡದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಆನಂದಸ್ವಾಮಿ ಗಡ್ಡದೇವರಮಠ ಅವರ ಪರವಾಗಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ಕ್ಷೇತ್ರವನ್ನು ತಮ್ಮ ಪ್ರತಿಷ್ಠೆಯ ಕಣವಾಗಿಸಿಕೊಂಡಿದ್ದಾರೆ. ಅವರು ಸಿಎಂ ಆಗಿ ಎರಡು ವರ್ಷಗಳ ಕಾಲ ಇದ್ದರೂ, ಈ ಭಾಗಕ್ಕೆ ಅವರ ಕೊಡುಗೆ ಶೂನ್ಯ. ಈ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯನ್ನು ಮಾಡದ ಬಸವರಾಜ ಬೊಮ್ಮಾಯಿಯವರನ್ನು ಸೋಲಿಸುವುದು ಎಲ್ಲರ ಕರ್ತವ್ಯ. ರೋಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‍ಗೆ 25 ಸಾವಿರಕ್ಕಿಂತಲೂ ಹೆಚ್ಚು ಮತವನ್ನು ಕೊಡುತ್ತೀರೆಂಬ ವಿಶ್ವಾಸವಿದೆ ಎಂದು ಹೇಳಿದರು.

ಅಚ್ಛೇ ದಿನ್ ಬರಲೇ ಇಲ್ಲ: ಮೋದಿಯವರು 10 ವರ್ಷಗಳ ಪ್ರಧಾನಿಯಾಗಿದ್ದರೂ, ಅವರು ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಮತ್ತೊಮ್ಮೆ ಜನರ ಬಳಿ ಮತ ಕೇಳುವ ನೈತಿಕತೆ ಅವರಿಗೆ ಇಲ್ಲ ಎಂದು ಜನರು ಹೇಳಬೇಕು. 2014ರಲ್ಲಿ ಕಪ್ಪುಹಣವನ್ನು ಎಲ್ಲರ ಖಾತೆಗೆ 15ಲಕ್ಷ ರೂ.ನೀಡುವ ಭರವಸೆ, ಪ್ರತಿ ವರ್ಷ 2 ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣಗೊಳಿಸುವ ಸುಳ್ಳನ್ನು ಹೇಳಿದ್ದಾರೆ. ಅವರು ನೀಡಿದ್ದ ಭರವಸೆಗಳನ್ನು ಸುಳ್ಳಾಗಿಸಿರುವ ಮೋದಿಯವರಿಗೆ ಜನರು ಮತ ನೀಡಬೇಕೇ? ಸುಳ್ಳು ಹೇಳಿದ ಮೋದಿಗೆ ಈ ಬಾರಿ ಮತ ನೀಡಬಾರದು ಎಂದು ಕರೆ ನೀಡಿದರು.

ಬರ ಪರಿಹಾರ ಬಂದಿಲ್ಲ: ರಾಜ್ಯದಿಂದ ಬಿಜೆಪಿಯ 25 ಸಂಸದರು ಇದ್ದರೂ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರದಲ್ಲಿ ಎಂದೂ ಧ್ವನಿ ಎತ್ತಲಿಲ್ಲ. ಕಾಂಗ್ರೆಸ್‍ನ ಸಂಸದ ಡಿ.ಕೆ.ಸುರೇಶ್ ಒಬ್ಬರೇ ಕೇಂದ್ರದ ವಿರುದ್ಧ ಧ್ವನಿ ಎತ್ತಿದ್ದವರು. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಕೇಂದ್ರ ಅನ್ಯಾಯ ಮಾಡಿದೆ. ರಾಜ್ಯದ 223 ತಾಲ್ಲೂಕುಗಳಲ್ಲಿ ಬರಗಾಲವಿದ್ದರೂ ಕೇಂದ್ರ ಬರ ಪರಿಹಾರ ನೀಡಲಿಲ್ಲ ಎಂದರು.

ಜನರ ಕಷ್ಟವನ್ನು ಕೇಳುತ್ತಿಲ್ಲ: ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರವಾಹ ಬಂದಾಗ, ಮೋದಿಯವರು ರಾಜ್ಯದ ಜನರಿಗೆ ನೆರವನ್ನು ನೀಡಲಿಲ್ಲ. ಈಗ ರಾಜ್ಯಕ್ಕೆ ಬರಗಾಲ ಬಂದಿದ್ದರೂ, ಜನರ ಕಷ್ಟವನ್ನು ಮೋದಿಯವರು ಕೇಳುತ್ತಿಲ್ಲ. 2023ರ ಸೆಪ್ಟೆಂಬರ್ ತಿಂಗಳಲ್ಲಿ ಬರ ಪರಿಹಾರ ಕೋರಿ, ಕೇಂದ್ರಕ್ಕೆ ಮನವಿ ಸಲ್ಲಿಸಲಾಯಿತು.

ಕೇಂದ್ರದ ತಂಡ ಪರಿಶೀಲಿಸಿ ವರದಿ ನೀಡಿದ ನಂತರವೂ ಕೇಂದ್ರ ಪರಿಹಾರ ನೀಡಲಿಲ್ಲ. ಆದ್ದರಿಂದ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕೇಂದ್ರ ಸರ್ಕಾರ ಬರಪರಿಹಾರ ನೀಡುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನ ಬಳಿ ಹೋಗದಿದ್ದರೆ, ಕೇಂದ್ರ ರಾಜ್ಯಕ್ಕೆ ಬರಪರಿಹಾರ ನೀಡುವತ್ತ ಗಮನವನ್ನೇ ಹರಿಸುತ್ತಿರಲಿಲ್ಲ ಎಂದರು.

ನಮ್ಮ ಅಭ್ಯರ್ಥಿ ಗೆಲ್ಲಬೇಕು: ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಮಹದಾಯಿ ಯೋಜನೆಗೆ ಜಾರಿ ಮಾಡಿಲ್ಲ. ಕೇಂದ್ರ ಸರಕಾರದಿಂದ ಪರಿಸರ ತೀರುವಳಿಯನ್ನು ಬೊಮ್ಮಾಯಿ ಕೊಡಿಸಲು ಆಗಲಿಲ್ಲ. ಮೋದಿ ಇಂದಿನವರೆಗೆ ಅನುಮತಿ ನೀಡಿಲ್ಲ. ಕನಿಷ್ಠ 1ಲಕ್ಷ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲಬೇಕು. ಬಸವರಾಜ ಬೊಮ್ಮಾಯಿಯವರನ್ನು ಸೋಲಿಸಬೇಕು ಎಂದು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News