ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ನನಗೆ, ನನ್ನ ಸರಕಾರಕ್ಕೆ ಶಕ್ತಿ ಬರುತ್ತದೆ : ಸಿಎಂ ಸಿದ್ದರಾಮಯ್ಯ
ಹಾವೇರಿ : ‘ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ಈ ಬಾರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಅಷ್ಟೇ ಸತ್ಯ. ಇಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ನನಗೆ, ನನ್ನ ನೇತೃತ್ವದ ಸರಕಾರಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದ ಚಂದಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸಂಸದ ಬಸವರಾಜ ಬೊಮ್ಮಾಯಿ ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುತ್ತಿದ್ದು, ಇಂತಹವರು ರಾಜಕಾರಣದಲ್ಲಿ ಇರಬಾರದು. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಕಳುಹಿಸಿ. ಮುಂದಿನ ದಿನಗಳಲ್ಲಿ ಅಜ್ಜಂ ಪೀರ್ ಖಾದ್ರಿಗೂ ಒಳ್ಳೆಯ ಅವಕಾಶ ಕಲ್ಪಿಸುತ್ತೇನೆ’ ಎಂದು ತಿಳಿಸಿದರು.
ಯಡಿಯೂರಪ್ಪನನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲಾನ್ ಮಾಡಿದ್ದರು. ಅದಕ್ಕೆ ಜೊತೆಯಲ್ಲಿದ್ದೆ ಯಡಿಯೂರಪ್ಪಗೆ ಟಾಂಗ್ ಕೊಟ್ಟರು. ಮೋದಿ ಮಹಾನ್ ಸುಳ್ಳುಗಾರ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ‘ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ’ ಎಂದು ದೇವೇಗೌಡ ಹೇಳಿದ್ದರು. ಈಗ ಇಬ್ಬರೂ ಬಾಯಿ ಬಾಯಿ ಆಗಿದ್ದಾರೆ ಎಂದು ಟೀಕಿಸಿದರು.
ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆರಿಸುವ ಮತ್ತೊಂದು ಅವಕಾಶ ಶಿಗ್ಗಾಂವಿ ಕ್ಷೇತ್ರದ ಜನತೆಗೆ ಸಿಕ್ಕಿದೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ಶ್ರೀಮಂತ ಕುಟುಂಬದಿಂದ ಬಂದವರು. ಅವರಿಗೆ ಹಳ್ಳಿ ಬದುಕು ಗೊತ್ತಿಲ್ಲ, ಬಡವರ ಬದುಕು ಗೊತ್ತಿಲ್ಲ. ಆದರೆ ಕಾಂಗ್ರೆಸ್ ಅಭ್ಯರ್ಥಿ ಅತ್ಯಂತ ಸಾಮಾನ್ಯ ಕುಟುಂಬದಿಂದ ಬಂದು ಬಡವರ ಕಷ್ಟ-ಸುಖ ಗೊತ್ತಿರುವವರು. ಇವರನ್ನು ಗೆಲ್ಲಿಸಿದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದು ಅವರು ಕೋರಿದರು.
ಮೋದಿ ಕುಟುಂಬ ರಾಜಕಾರಣದ ಬಗ್ಗೆ ಭರ್ಜರಿ ಭಾಷಣ ಮಾಡ್ತಾರೆ. ಆದರೆ ಇಲ್ಲಿ ಮಾಜಿ ಸಿಎಂ ಮೊಮ್ಮಗ, ಮಾಜಿ ಸಿಎಂ ಮಗನಿಗೆ ಟಿಕೆಟ್ ನೀಡಿದ್ದಾರೆ. ಇದು ಕುಟುಂಬ ರಾಜಕಾರಣ ಅಲ್ಲವೇ ಮೋದಿ ಯವರೇ?. ನಾನು ನಾಡಿನ ಜನತೆಯ ಪ್ರೀತಿ, ಆಗ್ರಹಗಳಿಗೆ ಬಗ್ಗುತ್ತೇನೆಯೇ ಹೊರತು, ಬಿಜೆಪಿ ಮತ್ತು ದೇವೇಗೌಡರ ಷಡ್ಯಂತ್ರಗಳಿಗೆ ಬಗ್ಗುವುದಿಲ್ಲ. ಜಗ್ಗುವುದು ಇಲ್ಲ. ಎಲ್ಲಿಯವರೆಗೂ ರಾಜ್ಯದ ಜನರ ಆಶೀರ್ವಾದ ಇರುತ್ತದೋ ಅಲ್ಲಿಯವರೆಗೂ ನಾನು ಬಿಜೆಪಿ ಕುತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಗುಡುಗಿದರು.
‘ಮಾತೆತ್ತಿದರೆ ದಮ್ಮು-ತಾಕತ್ತು ಎನ್ನುವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ರಾಜ್ಯಕ್ಕಾಗಲಿ, ಕ್ಷೇತ್ರಕ್ಕಾಗಲಿ ಏನು ಕೊಟ್ಟಿದ್ದಾರೆ ಹೇಳಿ. ನಮ್ಮ ಸರಕಾರ ಐದು ಗ್ಯಾರಂಟಿ ಯೋಜನೆಗಳ ಮೂಲಕ ಇಡೀ ರಾಜ್ಯದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ. ಎಲ್ಲ ಜಾತಿ, ಎಲ್ಲ ಧರ್ಮದ ಬಡವರ ಖಾತೆಗಳಿಗೆ ನೇರವಾಗಿ 56ಸಾವಿರ ಕೋಟಿ ರೂ.ಹಾಕಿದ್ದೇವೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ
‘ಸಿದ್ದರಾಮಯ್ಯ ‘ಅಹಿಂದ’ ಮಾಡಿದಾಗ ಅವರ ಜೊತೆಗೆ ಗಟ್ಟಿಯಾಗಿ ನಿಂತ ವೀರಶೈವ ಸಮುದಾಯದ ನಾಯಕ ನಾನೊಬ್ಬನೇ. ಅವರು 2006ರಲ್ಲಿ ಜೆಡಿಎಸ್ಗೆ ರಾಜೀನಾಮೆ ಕೊಟ್ಟು ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ಯಾವ ರೀತಿ ಸಹಾಯ ಮಾಡಿದ್ದೇನೆಂದು ನೆನಪಿಸಿಕೊಳ್ಳಲಿ. ಉಪಮುಖ್ಯಮಂತ್ರಿಯನ್ನಾಗಿ ಮಾಡಿ ರಾಜಕೀಯವಾಗಿ ಬೆಳೆಸಿದ ದೇವೆಗೌಡರಿಗೆ ಕೈಕೊಟ್ಟು ಕಾಂಗ್ರೆಸ್ ಜೋತೆ ಕೈಜೋಡಿಸಿರುವ ನಿಜವಾದ ಶಕುನಿ ಸಿದ್ದರಾಮಯ್ಯ ಎಂದು ಜನತೆ ಮಾತನಾಡುತ್ತಿದ್ದಾರೆ. ಜೆಡಿಎಸ್‌ನಿಂದ ಹೊರ ಬಂದಾಗ ಪ್ರಗತಿಪರ ಜನತಾದಳ ಪಕ್ಷದ ಅಡಿಯಲ್ಲಿ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಮಾಡಿ ಅವರ ಅಸ್ತಿತ್ವ ಉಳಿಸಿದ್ದು ಇದೆ ಬೊಮ್ಮಾಯಿ ಎನ್ನುವುದನ್ನು ಮರೆತಿದ್ದಾರೆ’
-ಬಸವರಾಜ ಬೊಮ್ಮಾಯಿ, ಸಂಸದ