ಶಿಗ್ಗಾಂವಿ | ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು : ಬೊಮ್ಮಾಯಿ

Update: 2024-11-11 12:00 GMT

 ಬಸವರಾಜ ಬೊಮ್ಮಾಯಿ

ಹಾವೇರಿ : "ಶಿಗ್ಗಾಂವಿ ಸವಣೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ರೌಡಿ ಶೀಟರ್ ಓಪನ್ ಇದೆ ಎಂದು ಹಾವೇರಿ ಎಸ್ಪಿ ಹೇಳಿದ್ದಾರೆ. ಅಂದರೆ ಅವರ ವಿರುದ್ದ ಇನ್ನೂ ಹಲವಾರು ಕೇಸ್‌ಗಳು ಇವೆ ಅಂತ ಅರ್ಥ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿಗ್ಗಾಂವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಳೆದ ವರ್ಷ ತಮ್ಮ ಮೇಲೆ ಹದಿನೇಳು ಹದಿನೆಂಟು ಕೇಸ್ ಇದೆ ಎಂದು ನಾಮಪತ್ರದಲ್ಲಿ ಅಪಿಡವಿಟ್ ಸಲ್ಲಿಸಿದ್ದರು. ಈಗ ಅದ್ಯಾವುದು ಅನ್ವಯಿಸುವುದಿಲ್ಲ ಎಂದು ಹಾಕಿದ್ದಾರೆ. ಆದರೆ, ಹಾವೇರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದದ ಪ್ರಕರಣ ಒಪನ್ ಇದೆ ಎಂದು ಹೇಳಿದ್ದಾರೆʼ ಎಂದು ತಿಳಿಸಿದರು.

ʼಅಜ್ಜಂಪಿರ್ ಖಾದ್ರಿ ಅವರು ಚುನಾವಣೆ ಮುಂಚೆ ಕಾಂಗ್ರೆಸ್ ಅಭ್ಯರ್ಥಿ ರೌಡಿ ಎಂದು ಹೇಳಿದ್ದರು. ಆದರೆ, ಆ ಮೇಲೆ ಅವರು ಅವರೊಂದಿಗೆ ಸೇರಿಕೊಂಡರು, ಅವರಂತವರು ಹೇಳಿದ ಮೇಲೆ ಅದನ್ನು ಅಲ್ಲಗಳೆಯಲು ಆಗುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಚುನಾವಣಾಧಿಕಾರಿಗಳು ಪರಿಶೀಲನೆ ಮಾಡಬೇಕು. ಅವರ ವಿರುದ್ದ ರೇಪ್ ಕೇಸ್ ಸೆರಿದಂತೆ 17 ಕೇಸ್ ಇತ್ತು. ಅವರ ವಿರುದ್ದದ ಪ್ರಕರಣಗಳ ಕುರಿತು ಚುನಾವಣಾಧಿಕಾರಿಗಳು ಸರಕಾರದ ಒತ್ತಡಕ್ಕೆ ಮಣಿದು ಪರಿಶೀಲನೆ ನಡೆಸಿಲ್ಲ. ಈಗ ಎಸ್ಪಿಯವರು ಅವರ ವಿರುದ್ದ ಪ್ರಕರಣ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ, ನಾನು ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ‌ʼ ಎಂದು ಹೇಳಿದರು.

ʼಈ ವಿಷಯಕ್ಕೆ ಸಂಬಂಧಿಸಿದಂತೆ ಹಾವೇರಿ ಡಿಸಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಚುನಾವಣಾಧಿಕಾರಿ ಎಸಿಗೆ ದೊಡ್ಡ ಜವಾಬ್ದಾರಿ ಇದೆ. ಅವರು ಪರಿಶೀಲನೆ ಮಾಡಿ ಕೂಡಲೇ ಕ್ರಮ ಕೈಗೊಳ್ಳಬೇಕು. ವಾಸ್ತವ ಏನಿದೆ ಎಂದು ಜನರಿಗೆ ತಿಳಿಸಬೇಕು. ಇಲ್ಲದಿದ್ದರೆ, ಅವರೂ ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬರುತ್ತದೆ. ನಾವು ಮೊದಲು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ನಂತರ ಕಾನೂನಿನ ಹೋರಾಟ ಮಾಡುತ್ತೇನೆ. ಸುಳ್ಳು ಅಫಿಡವಿಟ್ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ. ಇದರ ಬಗ್ಗೆ ತನಿಖೆಯಾಗಬೇಕುʼ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಮಹೇಶ್ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News