ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣ: ವಿಶೇಷ ತನಿಖಾ ತಂಡ ರಚನೆಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಸೂಚನೆ
ಹಾವೇರಿ: ಹಾನಗಲ್ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಆಳವಾದ ತನಿಖೆ ಆಗಬೇಕಿದ್ದು, ಈ ಬಗ್ಗೆ ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಂ ಸೂಚಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳ ಹಿನ್ನೆಲೆ, ಬೇರೆ ಸಂಘಟನೆಯವರ ಜೊತೆ ಸಂಪರ್ಕದಲ್ಲಿ ಇದ್ದಾರೆಯೇ ಎನ್ನುವುದರ ಬಗ್ಗೆ ತನಿಖೆ ಆಗಬೇಕು. ಹಾವೇರಿ ಎಸ್ಪಿ ಮುಂದಾಳತ್ವದಲ್ಲಿ ತನಿಖೆ ನಡೆಯಬೇಕು. ಆದಷ್ಟು ಶೀಘ್ರ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕೆಂದು ನಿರ್ದೇಶಿಸಿದರು.
ಪ್ರಕರಣದ ಸಂಬಂಧ ಎಸ್ಪಿ, ಡಿವೈಎಸ್ಪಿ ಜೊತೆ ನಾನು ಮಾತಾಡಿದ್ದೇನೆ. ತನಿಖೆ ಸರಿಯಾದ ದಾರಿಯಲ್ಲಿ ಸಾಗಬೇಕು. ಸಂತ್ರಸ್ತೆ ಮಹಿಳೆಗೆ ನ್ಯಾಯ ಸಿಗಬೇಕು. ಇಂತಹ ದುರ್ಘಟನೆ ಸಮಾಜದಲ್ಲಿ ನಡೆಯಬಾರದು ಎಂದ ಅಝೀಂ, ಅಲ್ಪಸಂಖ್ಯಾತ ಸಮುದಾಯಗಳಿಗೆ ಸಿಗಬೇಕಾದ ಹಕ್ಕುಗಳಿಗೆ ಧಕ್ಕೆ ಆದಾಗ ಅವರ ರಕ್ಷಣೆಗೆ ಹೋಗುವುದು ಅಲ್ಪಸಂಖ್ಯಾತ ಆಯೋಗದ ಕರ್ತವ್ಯ ಎಂದು ನುಡಿದರು.
ಅನೈತಿಕ ಪೊಲೀಸ್‌ಗಿರಿ ಹೆಸರಲ್ಲಿ ಕಾನೂನು ಕೈಗೆ ತೆಗೆದುಕೊಳ್ಳಲು ಯಾರನ್ನೂ ಬಿಡಬಾರದು. ಇದನ್ನು ಮಟ್ಟ ಹಾಕಲು ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.
ಸಂತ್ರಸ್ತೆ ಜೊತೆ ತಾನು ಮಾತನಾಡಿದ್ದು, ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದೆ. ಆದರೆ, ಸಂತ್ರಸ್ತೆಯು ಕೆಲಸ ಬೇಡ, ಮನೆ ಬೇಕು ಎಂದು ಕೋರಿದ್ದು, ಮನೆ ಮಂಜೂರು ಮಾಡುವಂತೆ ವಸತಿ ಸಚಿವ ಝಮೀರ್ ಅಹ್ಮದ್ ಅವರಿಗೆ ಪತ್ರ ಬರೆಯುತ್ತೇನೆ ಎಂದು ಅಬ್ದುಲ್ ಅಝೀಂ ತಿಳಿಸಿದರು.