ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಸ್ಪಷ್ಟನೆ

Update: 2024-11-11 16:06 GMT

ಹಾವೇರಿ( ಶಿಗ್ಗಾಂವಿ): "ಶಿಗ್ಗಾಂವಿ ಸವಣೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ರೌಡಿ ಶೀಟರ್ ಓಪನ್ ಇದೆ ಎಂದು ಎಸ್ಪಿ ಹೇಳಿದ್ದಾರೆ. ಅಂದರೆ ಅವರ ವಿರುದ್ದ ಇನ್ನೂ ಹಲವಾರು ಕೇಸ್‌ಗಳು ಇವೆ ಅಂತ ಅರ್ಥ" ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ವಿರುದ್ಧ ರೌಡಿಶೀಟ್ ಇಲ್ಲ ಎಂದು ಸ್ಷಷ್ಟನೆ ನೀಡಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದವರಾದ ಯಾಸೀರ್ ಅಹ್ಮದ್ ಪಠಾಣ್ ಇವರ ಮೇಲೆ ರೌಡಿಶೀಟ್ ಇದೆ ಅಂತ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ. ಶಿಗ್ಗಾಂವಿಯ ಡಿಎಸ್‌ಪಿ ಮತ್ತು ಪೊಲೀಸ್ ಇನ್ಸಪೆಕ್ಟರ್ (ಪಿಐ) ಅವರ ಕಚೇರಿಯ ದಾಖಲಾತಿಗಳನ್ನು ಪರಿಶೀಲಿಸಲಾಗಿದ್ದು, ಪ್ರಸ್ತುತ ಯಾಸೀರ್ ಪಠಾಣ್ ಅವರ ಮೇಲೆ ಯಾವುದೇ ರೌಡಿ ಶೀಟ್ ಇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಬಸವರಾಜ ಬೊಮ್ಮಾಯಿ, ಶಿಗ್ಗಾಂವಿ ಸವಣೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ರೌಡಿ ಶೀಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಹೇಳಿಕೆ ಬದಲಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಾವೇರಿ ಎಸ್ಪಿ ಕಾಂಗ್ರೆಸ್ ಅಭ್ಯರ್ಥಿಯ ಕುರಿತು ಸ್ಪಷ್ಟೀಕರಣ ನೀಡಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾವೇರಿ ಎಸ್ಪಿ ಮಾದ್ಯಮದ ಪ್ರಶ್ನೆಗೆ ಇರುವ ಪರಿಸ್ಥಿತಿಯನ್ನು ಸತ್ಯವನ್ನು ಹೇಳಿದ್ದರು. ಅದು ಮಾಧ್ಯಮದಲ್ಲಿ ಬಂದಿದೆ. ಎಸ್ಪಿ ಸುಮ್ಮನೆ ಹೇಳಿಕೆ ನೀಡುವುದಿಲ್ಲ. ಮಾಹಿತಿ ಪಡೆದುಕೊಂಡೇ ಹೇಳಿರುತ್ತಾರೆ. ಈಗ ಸರ್ಕಾರದ ಒತ್ತಡಕ್ಕೆ ಮಣಿದು ಯಾವುದೇ ಪ್ರಕರಣ ಇಲ್ಲ ಅಂತ ಹೇಳುತ್ತಾರೆ. ಎಸ್ಪಿ ಹೇಳಿಕೆಯ ಬಗ್ಗೆ ತನಿಖೆಯಾಗಬೇಕು. ಯಾವುದು ಸತ್ಯ ಎನ್ನುವುದು ಗೊತ್ತಾಗಬೇಕು. ಈ ಬಗ್ಗೆ ನಾವು ನಾಳೆ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು.

ಕಳೆದ ವರ್ಷ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಅಷ್ಟೊಂದು ಪ್ರಕರಣಗಳು ಇದ್ದವು. ಪ್ರಕರಣಗಳು ಮುಕ್ತಾಯವಾಗಲು ಏನೆಲ್ಲ ನಿಯಮ ಇದೆ ಎಂದು ಎಸ್ಪಿಯವರು ಪೊಲಿಸ್ ಮ್ಯಾನುವಲ್ ಏನು ಅಂತ ಅವರೇ ಹೇಳಿದರು. ಈಗ ಯಾವುದೇ ಪ್ರಕರಣ ಇಲ್ಲ ಅಂತ ಸರ್ಕಾರ ಹೇಳಿಸಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿಯ ತಾಲೂಕಿನಲ್ಲಿಯೇ ಅವರ ಇರುದ್ದ ಕೇಸ್ ಗಳಿವೆ. ನಾನು ಯಾರ ವಿರುದ್ದವು ದ್ವೇಷದ ರಾಜಕಾರಣ ಮಾಡುವುದಿಲ್ಲ ಆ ಅಗತ್ಯ ನನಗಿಲ್ಲ. ಎಸ್ಪಿಗೆ ಆ ರೀತಿ ಹೇಳಿಕೆ ನೀಡಲು ನಾನು ಹೇಳಿದ್ನಾ ಎಂದು ಪ್ರಶ್ನಿಸಿದರು.

ಇನ್ನು ಬಿಜೆಪಿ ಅಭ್ಯರ್ಥಿ ವಿರುದ್ದ ಬಿಟ್ ಕಾಯಿನ್ ಆರೋಪ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ರಾಜ್ಯ ಸರ್ಕಾರ ಕಳೆದ ಒಂದೂವರೆ ವರ್ಷದಿಂದ ತನಿಖೆ ಮಾಡುತ್ತಿದೆ. ಬಿಟ್ ಕಾಯಿನ್ ಗೂ ಭರತ್ ಬೊಮ್ಮಾಯಿಗೂ ಯಾವುದೇ ಸಂಬಂಧ ಇಲ್ಲ. ಅವರ ಆರೋಪ ನಿರಾಧಾರ ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News