ಹಾವೇರಿ | ಒಣ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತ: ಕಾರಿಗೆ ಬೆಂಕಿ ಹಚ್ಚಿ ರೈತರ ಆಕ್ರೋಶ

Update: 2024-03-11 14:50 GMT

ಹಾವೇರಿ: ಒಣ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತ ಹಿನ್ನೆಲೆ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕಲ್ಲುತೂರಾಟ ಮಾಡಿ, ಹಲವು ವಾಹನಗಳಿಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಯನ್ನು ಪೊಲೀಸರು ಬಂದ್ ಮಾಡಿಸಿದ್ದು, ಇದರಿಂದ ಕೆರಳಿದ ರೈತರು ಮೆಣಸಿನಕಾಯಿಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆಎನ್ನಲಾಗಿದೆ. ಮಾರ್ಕೆಟ್‍ನಲ್ಲಿ ದಟ್ಟಹೊಗೆಯಿಂದ ಸಾರ್ವಜನಿಕರ ಉಸಿರಾಟಕ್ಕೆ ಸಮಸ್ಯೆ ಉಂಟಾಗಿದೆ. ಅಲ್ಲದೆ ಕಾರಿಗೆ ಬೆಂಕಿ ಹಚ್ಚಿ, ಕಚೇರಿ ಮೇಲೆ ಕಲ್ಲು ತೂರಿದ್ದಾರೆ ಎಂದು ಹೇಳಲಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ವಾರ ಪ್ರತಿ ಕ್ವಿಂಟಾಲ್ ಮೆಣಸಿನಕಾಯಿ ಬೆಲೆ 20ಸಾವಿರ ರೂ.ಗಳಷ್ಟಿತ್ತು. ಈಗ ಕ್ವಿಂಟಾಲ್ ಮೆಣಸಿನಕಾಯಿ ಬೆಲೆ 12ಸಾವಿರ ರೂ.ಗೆ ಕುಸಿದಿದೆ. ಹೀಗಾಗಿ ಬ್ಯಾಡಗಿ ಎಪಿಎಂಸಿ ಕಚೇರಿಯಲ್ಲಿದ್ದ ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವರದಿಗೆ ಸೂಚನೆ: ಮೆಣಸಿನಕಾಯಿ ದರ 20 ಸಾವಿರ ರೂ.ನಿಂದ 12 ಸಾವಿರ ರೂ.ಗಳಿಗೆ ಕುಸಿತದ ಕಾರಣ ಎಪಿಎಂಸಿ ಮಾರುಕಟ್ಟೆಯಲ್ಲಿ ಗಲಾಟೆಯಾಗಿದೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ವರದಿ ನೀಡುವಂತೆ ಸಿಎಂ ಸೂಚಿಸಿದ್ದಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News