ಸಿದ್ದರಾಮಯ್ಯ ಕೇವಲ ಒಂದು ಕ್ಷೇತ್ರಕ್ಕೆ ಮುಖ್ಯಮಂತ್ರಿನಾ? : ಬಸವರಾಜ ಬೊಮ್ಮಾಯಿ
ಹಾವೇರಿ ( ಶಿಗ್ಗಾಂವಿ): ಶಿಗ್ಗಾಂವಿ ಸವಣೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಪ್ರಶ್ನಿಸುವ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ಒಂದು ಸಾರಿ ನನ್ನ ಕ್ಷೇತ್ರದಲ್ಲಿ ತಿರುಗಾಡಿ ಬನ್ನಿ, ನನ್ನ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ನಿಮ್ಮ ಕ್ಷೇತ್ರದಲ್ಲಿ ಆಗಿದೆಯಾ? ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಅವರು ಇಂದು ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ನಾರಾಯಣಪುರ, ಇಬ್ರಾಹಿಂಪುರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು.
ನನ್ನ ಕ್ಷೇತ್ರಕ್ಕೆ ಬಂದು ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡುವ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ನಿಮ್ಮ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂದು ನನಗೂ ಗೊತ್ತಿದೆ. ನಾನೂ ಅಲ್ಲಿ ತಿರುಗಾಡಿ ಬಂದಿದ್ದೇನೆ. ನಿಮ್ಮ ಕ್ಷೇತ್ರದ ಜನರು ಏನು ಅನ್ನುತ್ತಾರೆ ಎನ್ನುವುದು ನನಗೂ ಗೊತ್ತಿದೆ. ನಿಮ್ಮ ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಅಂತ ನೀವು ಸಿಎಂ ಆಗಿದ್ದಾಗಲೇ ಜನರು ನಿಮ್ಮನ್ನು ಸೋಲಿಸಿ ಕಳುಹಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಈಗ ತಮ್ಮ ಕ್ಷೇತ್ರಕ್ಕೆ 500 ಕೋಟಿ ರೂ. ಮಂಜೂರು ಮಾಡಿಕೊಂಡು ಅಡಿಗಲ್ಲು ಸಮಾರಂಭ ಮಾಡಿದ್ದಾರೆ. ಇವರು ಒಂದು ಕ್ಷೇತ್ರಕ್ಕೆ ಮುಖ್ಯಮಂತ್ರಿನಾ? ಇಡೀ ರಾಜ್ಯಕ್ಕೆ ಮುಖ್ಯಮಂತ್ರಿನಾ? ಎಂದು ಪ್ರಶ್ನಿಸಿದರು.
ನಾನು ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮಂಜೂರಾತಿ ಮಾಡಿದ 300 ಕೋಟಿ ರೂ. ಹಣವನ್ನು ವಾಪಸ್ ತೆಗೆದುಕೊಂಡರು. ಈ ಕ್ಷೇತ್ರದ ರಸ್ತೆ, ಬ್ರಿಡ್ಜ್, ಹೊಲದ ರಸ್ತೆ, ಸಭಾ ಭವನ ಎಲ್ಲವೂ ಅಭಿವೃದ್ಧಿ ಮಾಡುವುದಿತ್ತು. ಅಷ್ಟೇ ಅಲ್ಲ ಮಸೀದಿ, ದರ್ಗಾ ಅಭಿವೃದ್ಧಿಗೆ ಅಲ್ಪ ಸಂಖ್ಯಾತ ಸಮುದಾಯಕ್ಕೆ 10 ಕೋಟಿ ರೂಪಾಯಿ ಬಿಡುಗಡೆ ಮಾಡಿ ಡಿಸಿ ಅಕೌಂಟ್ ಗೆ ಬಂದಿರುವುದನ್ನು ವಾಪಸ್ ತೆಗೆದುಕೊಂಡಿದ್ದಾರೆ. ಇವರು ಈ ಕ್ಷೇತ್ರದ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ಕುಟುಕಿದರು.
ಕಳೆದ ಒಂದೂವರೆ ವರ್ಷದಿಂದ ಈ ಸರ್ಕಾರವರು ಒಂದಾದರೂ ಅಡಿಗಲ್ಲು ಹಾಕಿದ್ದಾರಾ, ಒಂದಾದರೂ ರಿಪೇರಿ ಕಾರ್ಯ ಮಾಡಿದ್ದಾರಾ ? ಬರಗಾಲ ಬಂದರೂ ರೈತರಿಗೆ ಪರಿಹಾರ ಕೊಟ್ಟಿಲ್ಲ. ಪ್ರವಾಹ ಬಂದರೂ ಪರಿಹಾರ ಇಲ್ಲ, ಇದನ್ನು ಸರ್ಕಾರ ಅಂತ ಹೇಗೆ ಕೆರೆಯುವುದು. ಎಸ್ಸಿ ಎಸ್ಟಿಗೆ ಮೀಸಲಿಟ್ಟಿರುವ 24 ಸಾವಿರ ಕೋಟಿ ರೂ. ಹಣ ಗ್ಯಾರೆಂಟಿ ಗೆ ತೆಗೆದುಕೊಂಡಿದ್ದಾರೆ. ಇವರು ಹೇಗೆ ಎಸ್ಸಿ ಎಸ್ಟಿಗಳನ್ನು ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ರೈತರ ಅಭಿವೃದ್ಧಿ ಇಲ್ಲಾ, ಗ್ರಾಮೀಣ ಅಭಿವೃದ್ಧಿ ಇಲ್ಲ, ವಿದ್ಯಾರ್ಥಿಗಳಿಗೆ ಬಸ್ ಇಲ್ಲದ ಹಾಗೆ ಮಾಡಿದ್ದಾರೆ. ಹಿಂದುಳಿದ ವರ್ಗ, ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ನಾವು ನೀಡುತ್ತಿದ್ದ ಶಿಷ್ಯವೇತನ ಸ್ಥಗಿತಗೊಳಿಸಿದ್ದಾರೆ. ಇವರಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ ಎಂದರು.
ಈ ಕ್ಷೇತ್ರದಲ್ಲಿ ಯಾವುದೇ ಭೇದ ಭಾವ ಮಾಡದೇ ಅಭಿವೃದ್ಧಿ ಮಾಡಿದ್ದೇನೆ. ಯಾವುದೇ ಕೋಮುಗಲಭೆ ಇಲ್ಲದಂತೆ ನೋಡಿಕೊಂಡಿದ್ದೇನೆ. ನಾನು ಈ ಕ್ಷೇತ್ರಕ್ಕೆ ಬಂದ ಮೇಲೆ ಎಲ್ಲರನ್ನು ಒಟ್ಟುಗೂಡಿಸಿ ಸೌಹಾರ್ದತೆ ಮೂಡಿಸಿದ್ದೇವೆ. ಸೌಹಾರ್ದತೆ ಇದ್ದರೆ, ಶಾಂತಿ ಇರುತ್ತದೆ. ಶಾಂತಿ ಇದ್ದರೆ ಪ್ರಗತಿಯಾಗುತ್ತದೆ. ಇಲ್ಲಿ ಹಾನಗಲ್ ರಾಜಕಾರಣ ಇಲ್ಲಿ ನಡೆಯುತ್ತಿದೆ. ಪೊಲಿಸ್ ಸ್ಟೇಷನ್ ರಾಜಕಾರಣ ಬೇಕಾ, ಸೌಹಾರ್ದತೆಯ ರಾಜಕಾರಣ ಬೇಕಾ ? ನೀವೆಲ್ಲ ಪ್ರಜ್ಞಾವಂತರಿದ್ದೀರಿ, ಪ್ರತಿಬಾರಿಯೂ ನನಗೆ ಬೆಂಬಲ ನೀಡುತ್ತ ಬಂದಿದ್ದೀರಿ, ಅವರೆಲ್ಲ ಬಂದು ಎರಡು ದಿನ ಜಾತ್ರೆ ಮಾಡಿ ಹೋಗುತ್ತಾರೆ. ನಾವು ನೀವು ಜೊತೆಯಲ್ಲಿ ಇರುವವರು, ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ವಕ್ಪ್ ಕಾಯ್ದೆ ತಿದ್ದುಪಡಿ ಕುರಿತು ನೇಮಕವಾಗಿರುವ ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರನ್ನು ಇಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ವಿಧಾನ ಪರಿಷತ್ ಪ್ರತಿಪಕ್ಚದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ನಾಯಕರು ಹಾಜರಿದ್ದರು.