ಹಾವೇರಿ | ನಿರಂತರ ಮಳೆಯಿಂದ ಮನೆ ಕುಸಿತ : ತಾಯಿ-ಮಕ್ಕಳಿಬ್ಬರು ಮೃತ್ಯು

Update: 2024-07-19 09:34 GMT

ಹಾವೇರಿ : ನಿರಂತರ ಮಳೆ ಹಿನ್ನೆಲೆಯಲ್ಲಿ ಮನೆಯೊಂದು ಕುಸಿದು ತಾಯಿ ಹಾಗೂ ಅವರ ಇಬ್ಬರು‌ ಮಕ್ಕಳು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಚನ್ನಮ್ಮ ದೊಡ್ಡಬಸಪ್ಪ ಹರಕುಣಿ (35) ಹಾಗು ಅವರ ಇಬ್ಬರು ಮಕ್ಕಳಾದ ಅಮೂಲ್ಯ ಮುತ್ತಪ್ಪ‌ ಹರಕುಣಿ (2), ಅನುಶ್ರೀ ಮುತ್ತಪ್ಪ ಹರಕುಣಿ (2) ಎಂದು ಗುರುತಿಸಲಾಗಿದೆ. ಯಲ್ಲಮ್ಮ ದೊಡ್ಡಬಸಪ್ಪ ಹರಕುಣಿ (70) ಎಂಬವರು ಗಾಯಗೊಂಡಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮುತ್ತಪ್ಪ ಹರಕುಣಿ ಎಂಬವರಿಗೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಜಿಲ್ಲೆಯಲ್ಲಿ‌ ಗುರುವಾರದಿಂದ‌ ಶುಕ್ರವಾರ ಬೆಳಿಗ್ಗೆವರೆಗೆ ನಿರಂತರವಾಗಿ ಮಳೆ ಸುರಿದಿದ್ದು, ಶುಕ್ರವಾರ ನಸುಕಿನ ಜಾವ ಸುಮಾರು 3.30 ಕ್ಕೆ ಚನ್ನಮ್ಮ ಹಾಗೂ ಕುಟುಂಬದವರು ಮಲಗಿದ್ದ ವೇಳೆ ಮನೆ ಕುಸಿದು, ಅವರ ಮೈ ಮೇಲೆಯೇ ಅವಶೇಷಗಳು ಬಿದ್ದಿವೆ. ಇದರಿಂದ ತಾಯಿ-ಮಕ್ಕಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News