ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

Update: 2024-01-15 10:08 GMT

Photo: X/@siddaramaiah

ಹಾವೇರಿ: ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೆ ಶಿಕ್ಷಿಸುವ ಪ್ರಯತ್ನ ಮಾಡುತ್ತೇವೆ. ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದು ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಹಾನಗಲ್  ಸಾಮೂಹಿಕ ಅತ್ಯಾಚಾರ  ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು,  ತನಿಖೆ ನಡೆಯುತ್ತಿದೆ. ನಮ್ಮ ಸರಕಾರದಲ್ಲಿ ಯಾರನ್ನೂ ಕಾನೂನು ಕೈಗೆತೆಗೆದುಕೊಳ್ಳಲು ಬಿಡುವುದಿಲ್ಲ. ಕಾನೂನಿನ ಪ್ರಕಾರ ಕ್ರಮ ಜರುಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಪ್ರಾಥಮಿಕ ವರದಿ ಬಂದ ನಂತರ ತೀರ್ಮಾನ

ಪ್ರಕರಣವನ್ನು ಎಸ್.ಐ.ಟಿಗೆ ವಹಿಸಲು ಬಿಜೆಪಿ ಆಗ್ರಹ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಎಸ್.ಐ.ಟಿ ನಲ್ಲಿರುವವವರೂ ಪೊಲೀಸರೇ ಆಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಾಥಮಿಕ ವರದಿ ಬಂದ ನಂತರ ತೀರ್ಮಾನಿಸಲಾಗುವುದು ಎಂದರು.

ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ,   ಪ್ರಕರಣ ಮುಚ್ಚಿಹಾಕವ ಪ್ರಶ್ನೆಯೇ ಇಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಅರ್ಜಿಯನ್ನು ಪರಿಶೀಲನೆ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆದಾಗ ಗೃಹ ಸಚಿವರು ಭೇಟಿ ನೀಡಿದ್ದರು. ಭೇಟಿ ನೀಡುವಂತೆ ನಾನೇ ಸೂಚನೆ ನೀಡಿದ್ದೆ. ಇಲ್ಲಿ ಗೃಹ ಸಚಿವರು ಇರಲಿಲ್ಲ. ಕೇಂದ್ರದ ಮಾಜಿ ಸಚಿವ ಶಿವಣ್ಣ ಭೇಟಿ ನೀಡಿದ್ದಾರೆ.

ಸಂತ್ರಸ್ತೆಯನ್ನು ಭೇಟಿ ಮಾಡಿ ಸಾಂತ್ವನ ಹೇಳುವುದು ಒಂದು ಭಾಗವಾದರೆ, ಕಾನೂನಿನ ರೀತಿ ಕ್ರಮ ತೆಗೆದುಕೊಳ್ಳುವುದು ಮತ್ತೊಂದು ಭಾಗ. ಎರಡನ್ನೂ ಮಾಡಿದ್ದೇವೆ ಎಂದು ಹೇಳಿದರು.

ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡನೆ

ಮಾರ್ಚ್ ಮೊದಲ ವಾರದೊಳಗೆ ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವುದರಿಂದ ಫೆಬ್ರವರಿ ತಿಂಗಳಲ್ಲಿಯೇ ಬಜೆಟ್ ಮಂಡಿಸಲಾಗುವುದು ಎಂದರು.

ಕೇಂದ್ರ ಸರ್ಕಾರದಿಂದ ಪರಿಹಾರ ಬಂದ ನಂತರ ರೈತರಿಗೆ ಪುನಃ ಪರಿಹಾರ

 ರೈತರಿಗೆ 2000 ರೂ.ಗಳ ತಾತ್ಕಾಲಿಕ ಪರಿಹಾರವನ್ನು ನೀಡುತ್ತಿದ್ದು, ಕೇಂದ್ರ ಸರಕಾರದಿಂದ ಪರಿಹಾರ ಬಂದ ನಂತರ ಪುನಃ ಎನ್.ಡಿ.ಆರ್.ಎಫ್ ನಿಯಮಾವಳಿ ಗಳ ಪ್ರಕಾರ ಪರಿಹಾರ ನೀಡಲಾಗುವುದು ಎಂದರು.

ಮನುಷ್ಯತ್ವ ಇರಬೇಕು

ಅನಂತಕುಮಾರ್ ಹೆಗಡೆ ಅವರು ಇವತ್ತಿನವರೆಗೆ ನಾಪತ್ತೆಯಾಗಿದ್ದರು. ಚುನಾವಣೆ ಹತ್ತಿರ ಬಂದಂತೆ ಕಾಣಿಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ. ಸಂಸದರಾಗಿ ಮಾಜಿ ಮಂತ್ರಿಯಾಗಿ ಕ್ಷೇತ್ರ ಕ್ಕೆ ಏನಾದರೂ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಇಂದಿನವರೆಗೆ ಬಡವರ ಸಮಸ್ಯೆ ಕೇಳಿದ್ದಾರೆಯೇ? ಸಂಸ್ಕೃತಿ ಎಂದರೆ ಮನುಷ್ಯತ್ವ. ಮೊದಲು ಮನುಷ್ಯತ್ವ ಇರಬೇಕು ಎಂದರು.

ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ ಸಂತ್ರಸ್ತೆ ಕುಟುಂಬಸ್ಥರು

ಇಂದು ಹಾವೇರಿ ಜಿಲ್ಲೆ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರನ್ನು ನರಸೀಪುರ ಹೆಲಿಪ್ಯಾಡ್​ನಲ್ಲಿ ಭೇಟಿ ಮಾಡಿ ಸಂತ್ರಸ್ತೆ ಕುಟುಂಬಸ್ಥರು ಮನವಿ ಸಲ್ಲಿಸಿದರು.

ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳನ್ನು ಬಂಧಿಸಿಲಾಗಿದ್ದು, ತನಿಖೆ ನಡೆಯುತ್ತಿದೆ. ಗ್ಯಾಂಗ್‌ರೇಪ್‌ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ತೇವೆ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News