ಬ್ಯಾಡಗಿ ಎಪಿಎಂಸಿ ಕಚೇರಿಯಲ್ಲಿನ ದಾಂಧಲೆಯಲ್ಲಿ ವ್ಯಾಪಾರಸ್ಥರ ಕೈವಾಡ ಶಂಕೆ: ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ್

Update: 2024-03-12 10:09 GMT

ಹಾವೇರಿ:  ಬ್ಯಾಡಗಿ ಪಟ್ಟಣದ ಎಪಿಎಂಸಿ ಕಚೇರಿಗೆ ನುಗ್ಗಿ ಪೀಠೋಪಕರಣ ಧ್ವಂಸಗೊಳಿಸಿದ ಪ್ರಕರಣದಲ್ಲಿ ವ್ಯಾಪಾರಸ್ಥರ ಕೈವಾಡ ಇರಬಹುದು ಎಂದು ಬ್ಯಾಡಗಿ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  3 ಲಕ್ಷ ಕ್ವಿಂಟಾಲ್ ಗೂ ಅಧಿಕ ಮೆಣಸಿನಕಾಯಿ ಮಾರುಕಟ್ಟೆಗೆ ಬಂದಿದೆ. ಬಿಸಿಲು ಜಾಸ್ತಿಯಾಗಿರೋ ಕಾರಣ ದರ ಇಳಿಕೆಯಾಗಿದೆ.  ಆದರೆ ಈ ಸಂದರ್ಭದಲ್ಲಿ ಹೀಗೆ ಯಾಕೆ ರೈತರು ಮಾಡಿದ್ರು ಅನ್ನೋ ಪ್ರಶ್ನೆ ಕಾಡುತ್ತಿದೆ. ಇಂತಹ ಘಟನೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಯಾವತ್ತೂ ನಡೆದಿರಲಿಲ್ಲ, ಇದರಿಂದ ನನಗೆ ತುಂಬಾ ನೋವಾಗಿದೆ, ನಾನು ನನ್ನ ವರ್ತಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ  ಎಂದು ಹೇಳಿದರು.

ವರ್ತಕ ಸಂಘದ ಉಪಾಧ್ಯಕ್ಷ ಎ.ಆರ್ ನದಾಪ್ ಸುದ್ದಿಗಾರರೊಂದಿಗೆ ಮಾತನಾಡಿ, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿಲ್ಲ, ನಿನ್ನೆ ನಡೆದ ಘಟನೆ ಇದು ಒಂದು ಕುತಂತ್ರವಾಗಿದೆ ಎಂದು ಆರೋಪಿಸಿದರು.

75 ವರ್ಷಗಳಿಂದ ನಾನು ಇಲ್ಲಿ ಟೆಂಡರ್ ಹಾಕ್ತಾ ಇದ್ದೇನೆ. ಇಂತಹ ಪ್ರಕರಣ ಇಷ್ಟು ವರ್ಷದಲ್ಲಿ ನಾನು ನೋಡೇ ಇಲ್ಲ. ಮಾರುಕಟ್ಟೆ ದರ ಇಳಿಕೆಯಾಗಿಲ್ಲ, ಇದು ಉಹಾಪೋಹ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಉನ್ನತಿ ಕಂಡು ಹೀಗೆ ಕೆಲ ಕಿಡಗೇಡಿಗಳು ಕೃತ್ಯವೆಸಗಿದ್ದಾರೆ ಎಂದರು.

 ಮರು ಟೆಂಡರ್ ಆರಂಭ

ಸೋಮವಾರ ಟೆಂಡರ್ ನಡೆಯುವ ಸಂದರ್ಭದಲ್ಲಿ ಗಲಾಟೆ ನಡೆದಿದ್ದರಿಂದ ಇಂದು ಮತ್ತೊಮ್ಮೆ ಮರು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಮಾರುಕಟ್ಟೆಯಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಮಧ್ಯಾಹ್ನದ ಬಳಿಕ ದರ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.

 ಅಹಿತಕರ ಘಟನೆ  ಮರುಕರುಳಿಸದಂತೆ  ಮಾರುಕಟ್ಟೆ ಮತ್ತು ಬ್ಯಾಡಗಿ ಪಟ್ಟಣಕ್ಕೆ ಆಗಮಿಸುವ ಮಾರ್ಗದಲ್ಲಿ ಪೊಲೀಸರು ಬಿಗಿ ತಪಾಸಣೆಯನ್ನು ನಡೆಸುತ್ತಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News