ಮಂಗಳೂರು ವಿವಿಯಲ್ಲಿ ವಿವಿಧ ಶುಲ್ಕಗಳ ಏರಿಕೆ: ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ

Update: 2024-11-15 06:06 GMT

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯ ಶುಲ್ಕ ಸೇರಿದಂತೆ ವಿವಿಧ ಶುಲ್ಕಗಳನ್ನು ವಿಪರೀತ ಏರಿಕೆ ಮಾಡಲಾಗಿದೆ. ಇದೇ ವೇಳೆ ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ವೇತನದ ಮೇಲೆ ಕತ್ತರಿ ಪ್ರಯೋಗ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರು ವಿಶ್ವವಿದ್ಯಾನಿಲಯವು ಅದರಿಂದ ಪಾರಾಗಲು ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ಮುಂದಾಗಿದೆ. ಇದಕ್ಕಾಗಿ ಪರೀಕ್ಷಾ ಶುಲ್ಕದ ಪ್ರಮಾಣ ಸುಮಾರು ಶೇ.50ರಷ್ಟು ಹೆಚ್ಚಳ ಮಾಡಲಾಗಿದೆ. ಆ ಮೂಲಕ ವಿದ್ಯಾರ್ಥಿಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ ಎಂಬ ಆರೋಪ ಕೇಳಿಬಂದಿದೆ.

ವಿವಿಯು ಕಳೆದ ವರ್ಷ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕದ ಹೆಸರಿನಲ್ಲಿ 670 ರೂ. ವಸೂಲಿ ಮಾಡಿದೆ. ಆದರೆ ಇದುವರೆಗೆ ಮಾರ್ಕ್ಸ್ ಕಾರ್ಡ್ ನೀಡಿಲ್ಲ. ಇದೀಗ ಪರೀಕ್ಷಾ ಶುಲ್ಕವಾಗಿ 1,200 ರೂ. ವಸೂಲಿ ಮಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿತ ಶುಲ್ಕ, ಪರೀಕ್ಷಾ ಶುಲ್ಕ, ಮರುಮೌಲ್ಯಮಾಪನ ಶುಲ್ಕಗಳ ಏರಿಕೆಯ ಬಿಸಿ ವಿದ್ಯಾರ್ಥಿಗಳಿಗೆ ತಟ್ಟಿದೆ. ಶುಲ್ಕ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಕೆಲವು ವಿದ್ಯಾರ್ಥಿ ಸಂಘಟನೆಗಳು ವಿವಿ ಕುಲಪತಿಗೆ ಮನವಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ.

ಗೌರವಧನ ಹೆಚ್ಚಳಕ್ಕೆ ಆಗ್ರಹ: ಮಂಗಳೂರು ವಿವಿಯು 2022 ಫೆಬ್ರವರಿ 25ರಂದು ಹೊರಡಿಸಿದ ಆದೇಶದಲ್ಲಿ ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರಿಗೆ ಬೋಧನಾ ತರಗತಿಗೆ ಪ್ರತೀ ಗಂಟೆಗೆ 650 ರೂ. ಹಾಗೂ ಪ್ರಾಯೋಗಿಕ ತರಗತಿಗೆ 500 ರೂ., ಯುಜಿಸಿ ಅರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರಿಗೆ ಪ್ರತೀ ಗಂಟೆಗೆ 500 ರೂ. ಹಾಗೂ ಪ್ರಾಯೋಗಿಕ ತರಗತಿಗೆ 375 ರೂ. ಬೋಧನಾ ಶುಲ್ಕ ಉಲ್ಲೇಖಿಸಿತ್ತು. ಆದರೆ 2024ರ ಆಗಸ್ಟ್ 23ರಂದು ವಿವಿ ರಿಜಿಸ್ಟ್ರಾರ್ ನೀಡಿದ ಆದೇಶದಲ್ಲಿ ಯುಜಿಸಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳ ಬೋಧನಾ ಶುಲ್ಕದಲ್ಲಿ ಗಂಟೆಗೆ 650ರಿಂದ 50 ರೂ. ಕಡಿತ ಮಾಡಿದೆ. ಪ್ರಾಯೋಗಿಕ ತರಗತಿಗೆ ರೂ. 500ರಿಂದ ರೂ. 600ಕ್ಕೆ ಏರಿಕೆ ಮಾಡಲಾಗಿದೆ.

ಇದೇ ವೇಳೆ ಯುಜಿಸಿ ಅರ್ಹತೆ ಹೊಂದಿರದ ಉಪನ್ಯಾಸಕರ ಗೌರವ ಧನ ರೂ.500ರಿಂದ ರೂ.600ಕ್ಕೆ ಏರಿಸಲಾಗಿದೆ ಮತ್ತು ಪ್ರಾಯೋಗಿಕ ತರಬೇತಿಗೆ ರೂ.500ರಿಂದ ರೂ.600 ರೂ.ಗೆ ಏರಿಕೆ ಮಾಡಲಾಗಿದೆ. ಆಮೂಲಕ ಯುಜಿಸಿ ಅರ್ಹತೆ ಹೊಂದಿರುವವರು ಮತ್ತು ಅರ್ಹತೆ ಹೊಂದಿರದವರಿಗೆ ಸಮಾನ ಗೌರವಧನ ನೀಡಲು ವಿವಿ ಮುಂದಾಗಿದೆ.

ವಿವಿಯ ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರು 2024-25ನೇ ಸಾಲಿನಲ್ಲಿ ಅರ್ಹ ಅತಿಥಿ ಉಪನ್ಯಾಸಕರ ವೇತನವನ್ನು ಪರಿಷ್ಕರಿಸ ಬೇಕು. 100 ರೂ. ಏರಿಕೆ ಮಾಡುವಂತೆ ಮತ್ತು ಸರಕಾರಿ, ರಜಾದಿನ ಗಳ ವೇತನವನ್ನು ಕಡಿತಗೊಳಿಸದಂತೆ ಆಗ್ರಹಿಸಿದ್ದಾರೆ.

ವಿವಿ ಆದೇಶದಿಂದಾಗಿ ವಾರಕ್ಕೆ 15 ಅವಧಿಯನ್ನು ಹೊಂದಿರುವ ಯುಜಿಸಿ-ಅರ್ಹತೆ ಹೊಂದಿರದ ಅತಿಥಿ ಉಪನ್ಯಾಸಕ 36 ಸಾವಿರ ರೂ. ವೇತನ ಪಡೆಯುವಂತಾಗಿದೆ. ವಿಶ್ವವಿದ್ಯಾನಿಲಯದ ಈ ಆದೇಶವು ಪೂರ್ಣಕಾಲಿಕ ಯುಜಿಸಿ-ಅರ್ಹತೆಯನ್ನು ಹೊಂದಿರದ ಉಪನ್ಯಾಸಕರಿಗೆ ನೀಡುವ ಸಂಭಾವನೆಯನ್ನು ಮೀರುವಂತಿದೆ ಎಂದು ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಚ್ಚ ನ್ಯಾಯಾಲಯವು ಇತ್ತೀಚೆಗೆ ಯುಜಿಸಿ ನಿಯಮಾನುಸಾರ ಅರ್ಹತೆ ಇಲ್ಲದವರನ್ನು ಅತಿಥಿ ಉಪನ್ಯಾಸಕರನ್ನಾಗಿ ನೇಮಿಸದಂತೆ ಸೂಚಿಸಿದೆ. ಪರಿಸ್ಥಿತಿ ಹೀಗಿದ್ದರೂ ಕೇವಲ ಮಂಗಳೂರು ವಿವಿ ಯುಜಿಸಿ ನಿಯಮಾನುಸಾರ ಅರ್ಹತೆ ಇಲ್ಲದ ಉಪನ್ಯಾಸಕರಿಗೆ ವೇತನ ಹೆಚ್ಚಳಗೊಳಿಸಿ ಆದೇಶಿಸಿರುವುದು ಯುಜಿಸಿ ಅರ್ಹತೆ ಹೊಂದಿರುವ ಅತಿಥಿ ಉಪನ್ಯಾಸಕರ ಕೆಂಗಣ್ಣಿಗೆ ಗುರಿಯಾಗಿದೆ.

ಮಂಗಳೂರು ವಿವಿಯಲ್ಲಿ ಹಾಗೂ ವಿವಿ ಘಟಕ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಮೂರು ತಿಂಗಳಾದರೂ ನೇಮಕಗೊಂಡ ಅತಿಥಿ ಉಪನ್ಯಾಸಕರ ಪಟ್ಟಿಗೆ ಸಿಂಡಿಕೇಟ್‌ನ ಅನುಮೋದನೆ ಪಡೆದಿಲ್ಲ ಎಂದು ತಿಳಿದು ಬಂದಿದೆ.

ಕಾರ್ಯಭಾರ ಪರಿಷ್ಕರಣೆಗೆ ವಿಜ್ಞಾನ ವಿಭಾಗದವರ ಆಗ್ರಹ: ಮಂಗಳೂರು ವಿಶ್ವವಿದ್ಯಾನಿಲಯವು 2024-25ನೇ ಸಾಲಿನಲ್ಲಿ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕರ 4 ಗಂಟೆಗೆಳ ಪ್ರಾಯೋಗಿಕ ತರಗತಿಯನ್ನು 2 ಗಂಟೆ ಎಂದು ಪರಿಗಣಿಸಿ ವಾರಕ್ಕೆ 16 ಗಂಟೆಗಳ ಕಾರ್ಯಭಾರ ನಿರ್ವಹಿಸಬೇಕೆಂದು ಮೌಖಿಕ ಆದೇಶದಲ್ಲಿ ತಿಳಿಸಿದೆ. ಇದನ್ನು ಆಕ್ಷೇಪಿಸಿರುವ ಅತಿಥಿ ಉಪನ್ಯಾಸಕರು ತಮ್ಮ ಕಾರ್ಯಭಾರವನ್ನು ಪರಿಷ್ಕರಿಸುವಂತೆ ಕಾಲೇಜು ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ವಿಜ್ಞಾನ (ಪ್ರಾಯೋಗಿಕ) ವಿಷಯಗಳಲ್ಲಿ ಬೋಧನಾ ತರಗತಿಗಳ ಕಾರ್ಯಭಾರ ಪ್ರಾಯೋಗಿಕ ತರಗತಿಗಳ ಕಾರ್ಯಭಾರಕ್ಕಿಂತ ಕಡಿಮೆ ಇರುತ್ತವೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ಪ್ರಾಯೋಗಿಕ ತರಗತಿಗಳನ್ನು ಜಾಸ್ತಿಯಾಗಿ ತೆಗೆದುಕೊಂಡು 16 ಗಂಟೆಗಳ ಕಾರ್ಯಭಾರವನ್ನು ನಿರ್ವಹಿಸುವಂತಾಗಿದೆ.

ಬೋಧನಾ ತರಗತಿ 6 ಗಂಟೆಗಿಂತ ಕಡಿಮೆ ಇದ್ದಲ್ಲಿ ಪ್ರಾಯೋಗಿಕ ತರಗತಿಗಳ ಕಾರ್ಯಭಾರವು 20 ಗಂಟೆಯನ್ನು ಮೀರುತ್ತದೆ. ಅದೇ ರೀತಿ ವಾರದ ಕಾರ್ಯಭಾರವು ಕೂಡ 26 ಗಂಟೆಯನ್ನು ಮೀರಿಸುತ್ತದೆ. ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ನೀಡಿದ ಪ್ರಕಟನೆಯಲ್ಲಿ ವಿಜ್ಞಾನ (ಪ್ರಾಯೋಗಿಕ )ವಿಷಯಗಳಿಗೆ ಗರಿಷ್ಠ 19 ಗಂಟೆಗಳ ಕಾರ್ಯಭಾರವನ್ನು ನೀಡಲು ಆದೇಶಿಸಿದೆ. ಇಲಾಖೆಯ ಆದೇಶದಲ್ಲಿ 4 ಗಂಟೆಗಳ ಪ್ರಾಯೋಗಿಕ ತರಗತಿಗಳನ್ನು ಎರಡು ಗಂಟೆಯ ಅವಧಿಗೆ ಸಮ ಎಂದು ಪರಿಗಣಿಸಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ನೀಡಿರುವ ಮನವಿಯಲ್ಲಿ ದೂರಿರರುವ ಅತಿಥಿ ಉಪನ್ಯಾಸಕರು, ರಾಜ್ಯ ಸರಕಾರವು ಅತಿಥಿ ಉಪನ್ಯಾಸಕರಿಗೆ ನಿಗದಿಪಡಿಸಿದಂತೆ ತಮಗೂ ಕಾರ್ಯಭಾರ ಹಂಚಿಕೆ ಮಾಡುವಂತೆ ಮಂಗಳೂರು ವಿವಿ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕರು ಆಗ್ರಹಿಸಿದ್ದಾರೆ.

ಕೊರೋನ ಹಾವಳಿ ಬಳಿಕ ನಾವು ಪರೀಕ್ಷಾ ಶುಲ್ಕ ಕಡಿಮೆ ಮಾಡಿದ್ದೆವು. ಶುಲ್ಕ ಹೆಚ್ಚಳ ವಿಚಾರದಲ್ಲಿ ಪ್ರತ್ಯೇಕ ಸಮಿತಿ ರಚಿಸಿ ಪರಾಮರ್ಶೆ ನಡೆಸಿದ ಅನಂತರವೇ ಶುಲ್ಕ ಪರಿಷ್ಕರಣೆ ಮಾಡಲಾಗಿದೆ. ಸರಕಾರದ ಆದೇಶದಂತೆ ಪ್ರತೀ ವರ್ಷ ಶೇ.10ರಷ್ಟು ಶುಲ್ಕ ಏರಿಕೆ ಮಾಡಲು ಅವಕಾಶ ಇದೆ. ಆದರೆ ನಾವು ಮೂರು ವರ್ಷಗಳಿಂದ ಶುಲ್ಕ ಏರಿಕೆ ಮಾಡಿಲ್ಲ. ಈಗ ಅನಿವಾರ್ಯವಾಗಿ ಏರಿಕೆ ಮಾಡುವ ಸನ್ನಿವೇಶ ಸೃಷ್ಟಿಯಾಗಿದೆೆ. ಆದರೂ ವಿದ್ಯಾರ್ಥಿಗಳಿಗೆ ಹೊರೆಯಾಗುವ ರೀತಿಯಲ್ಲಿ ಶುಲ್ಕ ಏರಿಕೆ ಮಾಡಿಲ್ಲ.

-ಪ್ರೊ.ದೇವೇಂದ್ರಪ್ಪ, ಪರೀಕ್ಷಾಂಗ ಕುಲಸಚಿವರು

ರ್ಥಿಕ ಸಂಕಷ್ಟದಿಂದ ಪಾರಾಗಲು ಈಗ ಇರುವ ಕೋರ್ಸ್‌ಗಳನ್ನು ರದ್ದುಗೊಳಿಸುವುದರಿಂದ ಅಥವಾ ವಿದ್ಯಾರ್ಥಿಗಳ ಶುಲ್ಕ ಏರಿಕೆ ಮಾಡುವುದರಿಂದ ತಾತ್ಕಾಲಿಕ ಪರಿಹಾರ ಸಿಕ್ಕೀತು. ಆದರೆ ಇದರಿಂದಾಗಿ ಮುಂದಿನ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವ ಆತಂಕ ಇದೆ. ಈಗ ವಿವಿಯಲ್ಲಿ ಶೇ.80ರಷ್ಟು ಅತಿಥಿ ಉಪನ್ಯಾಸಕರೇ ಇದ್ದಾರೆ. ವಿವಿಗೆ ಆದಾಯ ಹೆಚ್ಚಳಕ್ಕೆ ಶಾಶ್ವತ ಪರಿಹಾರದ ಬಗ್ಗೆ ವಿವಿ ಆಡಳಿತ ಚಿಂತನೆ ನಡೆಸಬೇಕಾಗಿದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ವಿವಿ ಗಮನಹರಿಸಲಿ.

-ಡಾ.ಎಸ್.ಆರ್.ಹರೀಶ್ ಆಚಾರ್ಯ, ಮಾಜಿ ಸಿಂಡಿಕೇಟ್ ಸದಸ್ಯರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಇಬ್ರಾಹಿಂ ಅಡ್ಕಸ್ಥಳ

contributor

Similar News