ಅಮೆರಿಕಾ: ಭಾರತ ಮತ್ತು ಏಷ್ಯಾ ಚಿನ್ನಾಭರಣ ಅಂಗಡಿಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ 16 ಮಂದಿಯ ಬಂಧನ

ಕಳೆದ ಒಂದು ವರ್ಷದ ಅವಧಿಯಲ್ಲಿ ಅಮೆರಿಕಾದ ಪೂರ್ವ ಕರಾವಳಿಯಾದ್ಯಂತ ಇರುವ ಭಾರತೀಯ ಹಾಗೂ ಏಷ್ಯನ್ನರ ಚಿನ್ನಾಭರಣ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಹಲವಾರು ಹಿಂಸಾತ್ಮಕ ಸಶಸ್ತ್ರ ದರೋಡೆ ಕೃತ್ಯ ಎಸಗಿದ್ದ ಕುಖ್ಯಾತ ಅಪರಾಧ ತಂಡವೊಂದರ 16 ಮಂದಿಯನ್ನು ಬಂಧಿಸಲಾಗಿದೆ

Update: 2023-09-01 16:34 GMT

ವಾಶಿಂಗ್ಟನ್: ಕಳೆದ ಒಂದು ವರ್ಷದ ಅವಧಿಯಲ್ಲಿ ಅಮೆರಿಕಾದ ಪೂರ್ವ ಕರಾವಳಿಯಾದ್ಯಂತ ಇರುವ ಭಾರತೀಯ ಹಾಗೂ ಏಷ್ಯನ್ನರ ಚಿನ್ನಾಭರಣ ಅಂಗಡಿಗಳನ್ನೇ ಗುರಿಯಾಗಿಸಿಕೊಂಡು ಹಲವಾರು ಹಿಂಸಾತ್ಮಕ ಸಶಸ್ತ್ರ ದರೋಡೆ ಕೃತ್ಯ ಎಸಗಿದ್ದ ಕುಖ್ಯಾತ ಅಪರಾಧ ತಂಡವೊಂದರ 16 ಮಂದಿಯನ್ನು ಬಂಧಿಸಲಾಗಿದೆ ಎಂದು ndtv.com ವರದಿ ಮಾಡಿದೆ.

ಕೊಲಂಬಿಯಾ ಜಿಲ್ಲೆಯ ಅಮೆರಿಕಾ ಅಟಾರ್ನಿ ಜನರಲ್ ಕಚೇರಿಯು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ, ಬುಧವಾರ ಆರು ಮಂದಿ ಶಂಕಿತರನ್ನು ಫೆಡರಲ್ ಲಾ ಎನ್‍ ಫೋರ್ಸ್ ಮೆಂಟ್ ತನಿಖಾ ಸಂಸ್ಥೆಯು ಬಂಧಿಸಿದ್ದು, ಇದಕ್ಕೂ ಮುನ್ನ, ಎಂಟು ಮಂದಿ ಶಂಕಿತರನ್ನು ಬಂಧಿಸಲಾಗಿತ್ತು ಎಂದು ಹೇಳಲಾಗಿದೆ.

ಏಷ್ಯನ್ ಅಮೆರಿಕನ್ನರ ಮಾಲಕತ್ವದ ಚಿನ್ನಾಭರಣ ಅಂಗಡಿಗಳನ್ನು ಗುರಿಯಾಗಿಸಿಕೊಂಡು ನ್ಯೂ ಜೆರ್ಸಿ, ಪೆನ್ನಿಸಿಲ್ವೇನಿಯಾ, ವರ್ಜಿನಿಯಾ ಹಾಗೂ ಫ್ಲೋರಿಡಾಗಳಲ್ಲಿ ದರೋಡೆ ನಡೆಸಲು ಕೊಲಂಬಿಯಾ ಜಿಲ್ಲೆಯಲ್ಲಿ ಆರೋಪಿಗಳು ಜನವರಿ 7, 2022ರಿಂದ ಜನವರಿ 27, 2023ರ ನಡುವೆ ಪಿತೂರಿ ನಡೆಸಿದ್ದರು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಆರೋಪಿಗಳ ಗುಂಪು ಗುರಿಯಾಗಿಸಿಕೊಂಡಿದ್ದ ದಕ್ಷಿಣ ಏಷ್ಯನ್ನರ ಒಂಬತ್ತು ಚಿನ್ನಾಭರಣ ಅಂಗಡಿಗಳ ಹೆಸರನ್ನು ದೋಷಾರೋಪ ಪಟ್ಟಿಯಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳ ಪೈಕಿ ಕನಿಷ್ಠ ನಾಲ್ಕು ಚಿನ್ನಾಭರಣ ಅಂಗಡಿಗಳು ಭಾರತೀಯ ಮೂಲದ ಮಾಲಕರಿಗೆ ಸೇರಿವೆ ಎಂದು ಗುರುತಿಸಲಾಗಿದೆ.

ದರೋಡೆ ನಡೆಸಿ ಪಾರಾಗಲು ಕಳವು ಮಾಡಿದ ವಾಹನಗಳನ್ನು ಬಳಸುತ್ತಿದ್ದ ಆರೋಪಿಗಳ ಗುಂಪು, ಗಾಢ ಬಣ್ಣದ ವಸ್ತ್ರಗಳು, ಮುಸುಕುಗಳು ಹಾಗೂ ಕೈಗವಸುಗಳನ್ನು ಧರಿಸಿ, ಶಸ್ತ್ರಸಜ್ಜಿತವಾಗಿ ದಾಳಿ ನಡೆಸುತ್ತಿತ್ತು ಎಂದು ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಹಾಬ್ಸ್ ಕಾಯ್ದೆ ಎಂದು ಕರೆಯಲಾಗುವ ಕಾಯ್ದೆಯಡಿ ಅಂತರರಾಜ್ಯ ವಾಣಿಜ್ಯ ದರೋಡೆ ನಡೆಸಲು ಪಿತೂರಿ ನಡೆಸಿದ ಆರೋಪದಡಿ ಬಂಧಿತರ ವಿರುದ್ಧ 19 ದೋಷಾರೋಪವನ್ನು ಹೊರಿಸಲಾಗಿದೆ.

ತೀರ್ಪಿನ ಮಾರ್ಗಸೂಚಿ ಹಾಗೂ ಮತ್ತಿತರ ಅಂಶಗಳನ್ನು ಪರಿಗಣಿಸಿದ ನಂತರ ಫೆಡರಲ್ ನ್ಯಾಯಾಧೀಶರು ಸೂಕ್ತ ತೀರ್ಪು ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News