ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ : 33 ನಾಗರಿಕರು ಮೃತ್ಯು
ಗಾಝಾ : ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 33 ಫೆಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು Al Jazeera ವರದಿ ಮಾಡಿದೆ.
ಅಲ್-ಅವ್ದಾ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಮೊಹಮ್ಮದ್ ಸಲ್ಹಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಇತ್ತೀಚಿನ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ ಹಮಾಸ್ ಹೇಳಿಕೆ ಬಿಡುಗಡೆ ಮಾಡಿದ್ದು, ಇಸ್ರೇಲ್ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳದೆ, ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡದೆ, ಗಾಝಾದ ಮೇಲಿನ ಆಕ್ರಮಣ ನಿಲ್ಲದ ಹೊರತು ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದೆ.
ಗುರುವಾರ ಇಸ್ರೇಲ್ ಪಡೆಗಳ ದಾಳಿಗೆ ಹಮಾಸ್ ಉನ್ನತ ನಾಯಕ ಯಹ್ಯಾ ಸಿನ್ವರ್ ಹತರಾಗಿದ್ದರು. ಗಾಝಾದ ಕಟ್ಟಡವೊಂದಕ್ಕೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಯಹ್ಯಾ ಸಿನ್ವರ್ ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್‍ನ ಗಾಝಾ ಮುಖ್ಯಸ್ಥ ಖಲೀಕ್ ಹಯ್ಯ ಖಚಿತಪಡಿಸಿದ್ದಾರೆ. ಸಿನ್ವರ್ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ʼಸಿನ್ವರ್ ಹತ್ಯೆಯಾಗಿದ್ದರೂ ಇದು ಗಾಝಾದಲ್ಲಿನ ಯುದ್ಧದ ಅಂತ್ಯವಲ್ಲ' ಎಂದು ಹೇಳಿದ್ದರು.