ಉಕ್ರೇನ್ ನ ಪಟ್ಟಣದ ಮೇಲೆ ರಶ್ಯದ ವಾಯುದಾಳಿ | ಕನಿಷ್ಠ 10 ಮಂದಿ ಮೃತ್ಯು
ಕೊಸ್ತ್ಯಾನ್ಟಿನಿವ್ಕಾ : ಪೂರ್ವ ಉಕ್ರೇನ್ನ ಪಟ್ಟಣ ಕೊಸ್ತ್ಯಾನ್ಟಿವಿವ್ಕಾದ ಸೂಪರ್ ಮಾರ್ಕೆಟ್ ಮೇಲೆ ರಶ್ಯ ಶುಕ್ರವಾರ ನಡೆಸಿದ ವಾಯು ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಈ ಪಟ್ಟಣವು ರಶ್ಯದ ಅತಿ ಸಮೀಪದ ಸಮರನೆಲೆಯಿಂದ ಕೇವಲ 13 ಕಿ.ಮೀ.ಗಳಷ್ಟು ದೂರದಲ್ಲಿದ್ದು, ಹೆಚ್ಚುಕಮ್ಮಿ ಪ್ರತಿದಿನ ದಾಳಿಗಳನ್ನು ಎದುರಿಸುತ್ತಿದೆ.
ಕೊಸ್ತ್ಯಾನ್ಟಿನಿವ್ಕಾದ ಮೇಲೆ ರಶ್ಯದ ವಾಯುದಾಳಿಯಲ್ಲಿ ಹತ್ತು ಮಂದಿ ನಾಗರಿಕರು ಸಾವನ್ನಪ್ಪಿದ್ದು 35 ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಧಲ್ಲಿ ರಕ್ಷಣೆ ಹಾಗೂ ಶೋಧಕಾರ್ಯ ಮುಂದುವರಿದಿದೆ ಎಂದು ರಾಜ್ಯಪಾಲ ವಾಡಿಮ್ಫಿಲಾಶ್ಕಿನ್ ತಿಳಿಸಿದ್ದಾರೆ.
ಮತ್ತೆ ದಾಳಿ ನಡೆಯುವ ಸಾಧ್ಯತೆಯಿರುವುದರಿಂದ ಕೂಡಲೇ ಸ್ಥಳದಿಂದ ಓಡಿಹೋಗುವಂತೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಂತೆಯೇ ಡಜನ್ಗಟ್ಟಲೆ ಜನರು ಭಯ ಭೀತರಾಗಿ ಪಲಾಯನಗೈದಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆಯ ಪತ್ರಕರ್ತರು ತಿಳಿಸಿದ್ದಾರೆ. ರಶ್ಯದ ಫಿರಂಗಿ ದಳವು ನಗರದ ಮೇಲೆ ಶೆಲ್ ದಾಳಿ ನಡೆಸಿರುವುದಾಗಿ ಅವರು ಹೇಳಿದ್ದಾರೆ.
ರಶ್ಯ ಸೇನೆಯ ದಾಳಿಗೆ ಒಳಗಾದ ಸೂಪರ್ಮಾರ್ಕೆಟ್ ಮೇಲೆ ದಟ್ಟವಾದ ಹೊಗೆ ಎದ್ದಿರುವುದನ್ನು ಹಾಗೂ ಪೊಲೀಸರು ಆಸುಪಾಸಿನ ಬೀದಿಗಳನ್ನು ಸುತ್ತುವರಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವೀಡಿಯೊಗಳಲ್ಲಿ ಕಂಡುಬಂದಿದೆ.