ರಶ್ಯದ ಮೇಲೆ ಡ್ರೋನ್ ಸುರಿಮಳೆಗರೆದ ಉಕ್ರೇನ್: ಮಹಿಳೆ ಸಾವು
ಮಾಸ್ಕೋ: ರಶ್ಯದ ರಾಜಧಾನಿ ಮಾಸ್ಕೋ ಮತ್ತು ಪಶ್ಚಿಮದ ಪ್ರಾಂತಗಳ ಮೇಲೆ ಉಕ್ರೇನ್ ನಡೆಸಿದ ಅತೀ ದೊಡ್ಡ ಡ್ರೋನ್ ದಾಳಿಯಲ್ಲಿ ಕನಿಷ್ಟ ಒಬ್ಬ ಮಹಿಳೆ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ಹಲವು ಮನೆಗಳಿಗೆ ಹಾನಿಯಾಗಿದ್ದು ಮಾಸ್ಕೋದಲ್ಲಿ ಪ್ರಮುಖ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.
ವಿಶ್ವದ ಅತೀ ದೊಡ್ಡ ಪರಮಾಣು ಶಕ್ತ ದೇಶವಾಗಿರುವ ರಶ್ಯದ ಮೇಲೆ ಉಕ್ರೇನ್ 144 ಡ್ರೋನ್‍ಗಳನ್ನು ಪ್ರಯೋಗಿಸಿದ್ದು ಇದರಲ್ಲಿ ಮಾಸ್ಕೋ ವಲಯದಲ್ಲಿ ಕನಿಷ್ಟ 20 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ದಾಳಿಯ ಬಳಿಕ ಮಾಸ್ಕೋದ 4 ವಿಮಾನ ನಿಲ್ದಾಣಗಳಲ್ಲಿ ಮೂರನ್ನು ಮುಚ್ಚಲಾಗಿದೆ. ಮಾಸ್ಕೋವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯನ್ನೂ ಭಾಗಶಃ ಮುಚ್ಚಲಾಗಿದೆ. ಮಾಸ್ಕೋ ವಲಯದ ರಮೆನ್‍ಸ್ಕೋಯ್ ಜಿಲ್ಲೆಯಲ್ಲಿ ಎರಡು ಬಹುಮಹಡಿ ಕಟ್ಟಡಗಳಿಗೆ ಹಾನಿಯಾಗಿದ್ದು ಬೆಂಕಿ ಕಾಣಿಸಿಕೊಂಡಿದೆ. ಓರ್ವ ಮಹಿಳೆ ಸಾವನ್ನಪ್ಪಿದ್ದು ಇತರ 3 ಮಂದಿ ಗಾಯಗೊಂಡಿದ್ದಾರೆ. 43 ಜನರನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಸ್ಕೋ ಗವರ್ನರ್ ಆಂಡ್ರೆಯ್ ವೊರೊಬ್ಯೋವ್ ಹೇಳಿದ್ದಾರೆ.
ರಶ್ಯದ ಬ್ರಯಾಂಸ್ಕ್ ಪ್ರಾಂತದಲ್ಲಿ 70ಕ್ಕೂ ಹೆಚ್ಚು ಡ್ರೋನ್‍ಗಳನ್ನು ಹಾಗೂ ಇತರ ಪ್ರದೇಶಗಳಲ್ಲಿ 10 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ.