ಧರ್ಮನಿಂದನೆ ಆರೋಪ: ಪಾಕಿಸ್ತಾನದಲ್ಲಿ ಚರ್ಚ್ ಗಳ ಮೇಲೆ ದಾಳಿ
ಲಾಹೋರ್: ಕ್ರಿಶ್ಚಿಯನ್ ಕುಟುಂಬವೊಂದು ಧರ್ಮನಿಂದನೆ ಎಸಗಿದೆ ಎಂಬ ಆರೋಪದಲ್ಲಿ ಉದ್ರಿಕ್ತ ಗುಂಪೊಂದು ಪೂರ್ವ ಪಾಕಿಸ್ತಾನದಲ್ಲಿ ಹಲವು ಚರ್ಚ್ ಗಳಿಗೆ ಬೆಂಕಿಹಚ್ಚಿ ದಾಂಧಲೆ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೊಣ್ಣೆ, ಕಲ್ಲುಗಳನ್ನು ಹಿಡಿದಿದ್ದ ನೂರಾರು ಜನರು ಫೈಸಲಾಬಾದ್ ನಗರದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಹೆಚ್ಚಿರುವ ಪ್ರದೇಶದ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಸ್ಥಳೀಯ ಕ್ರಿಶ್ಚಿಯನ್ ಕುಟುಂಬವೊಂದು ಕುರ್ ಆನ್ ಪ್ರತಿಯನ್ನು ಸುಟ್ಟುಹಾಕಿದೆ ಎಂಬ ಸುದ್ಧಿ ಹಾಗೂ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಗುಂಪೊಂದು ಈ ಕೃತ್ಯ ನಡೆಸಿದೆ. 4 ಚರ್ಚ್ಗಳ ಪೀಠೋಪಕರಣಗಳನ್ನು ಧ್ವಂಸ ಮಾಡಿ ಬೆಂಕಿಹಚ್ಚಲಾಗಿದೆ. ಯಾರೂ ಗಾಯಗೊಂಡಿರುವ ವರದಿಯಾಗಿಲ್ಲ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಕಾನೂನು ಜಾರಿ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಕ್ರಿಶ್ಚಿಯನ್ ಸಮುದಾಯಕ್ಕೆ ರಕ್ಷಣೆಯನ್ನು ಖಾತರಿಪಡಿಸಬೇಕು ಎಂದು ಪಾಕಿಸ್ತಾನದ ಬಿಷಪ್ ಆಜಾದ್ ಮಾರ್ಷಲ್ ಆಗ್ರಹಿಸಿದ್ದಾರೆ.