ಕರಾಳ ಭೂಕಂಪಕ್ಕೆ ಅಫ್ಘಾನ್ ತತ್ತರ: ಸಾವಿನ ಸಂಖ್ಯೆ 2445ಕ್ಕೆ ಏರಿಕೆ
ಇಸ್ಲಾಮಾಬಾದ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ನಡೆದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 2445ಕ್ಕೆ ಏರಿದೆ ಎಂದು ತಾಲಿಬಾನ್ ಆಡಳಿತ ಪ್ರಕಟಿಸಿದೆ. ಇದು ದೇಶದಲ್ಲಿ ಎರಡು ದಶಕಗಳಲ್ಲೇ ಅತ್ಯಂತ ಭೀಕರ ವಿಕೋಪವಾಗಿದೆ ಎಂದು ಆಡಳಿತ ಸ್ಪಷ್ಟಪಡಿಸಿದೆ.
ಅಪ್ಘಾನಿಸ್ತಾನದ ನಾಲ್ಕನೇ ಅತಿದೊಡ್ಡ ನಗರವಾದ ಹೆರಾತ್ ನ ಜನನಿಬಿಡ ಪ್ರದೇಶಗಳಲ್ಲಿ ಶನಿವಾರ ಸಂಭವಿಸಿದ 6.3 ತೀವ್ರತೆಯ ಭೂಕಂಪದಿಂದ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇದಾದ ಬಳಿಕ ಮತ್ತೆ ಮೂರು ಬಾರಿ ಭೂಮಿ ಕಂಪಿಸಿದ್ದು, ಇದರ ತೀವ್ರತೆಯೂ 6.3, 5.9 ಹಾಗೂ 5.5 ಇತ್ತು ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ಪ್ರಕಟಿಸಿದೆ.
ವಿಕೋಪಗಳ ಸಚಿವಾಲಯದ ವಕ್ತಾರ ಜನನ್ ಸಯೀಕ್ ವಿಕೋಪದ ವಿವರನಿಡಿ, ಸಾವಿನ ಸಂಖ್ಯೆ 2445ಕ್ಕೇರಿದೆ ಎಂದು ಹೇಳಿದ್ದಾರೆ. ಬಳಿಕ ಪರಿಷ್ಕರಿಸಿ ಸಾವಿನ ಸಂಖ್ಯೆ 2000ವನ್ನು ದಾಟಿದೆ ಎಂದು ಹೇಳಿದ್ದಾರೆ. 9240 ಮಂದಿ ಗಾಯಗೊಂಡಿದ್ದು, 1320 ಮನೆಗಳು ನಾಶವಾಗಿದೆ ಎಂದು ವಿವರಿಸಿದ್ದಾರೆ.
ಹೆರಾತ್ ನಲ್ಲಿ ಕಲ್ಲು ಹಾಗೂ ಅವಶೇಷಗಳನ್ನು ಏರುತ್ತಾ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರನ್ನು ಹೊರತೆಗೆಯುತ್ತಿರುವ ಪ್ರಯತ್ನಗಳು ನಡೆಯುತ್ತಿವೆ.