ಅಮೆರಿಕ ಅಧ್ಯಕ್ಷೀಯ ಚುನಾವಣೆ: ಇಂದು ಮತದಾನ
ವಾಶಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಮಂಗಳವಾರ(ನ.5) ಮತದಾನ ನಡೆಯಲಿದ್ದು, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ.
ಅಮೆರಿಕದ ಪ್ರಜೆಗಳು ದೇಶದ 47ನೇ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತದಾನ ಮಾಡಲಿದ್ದಾರೆ. 7.8 ಕೋಟಿಗೂ ಹೆಚ್ಚು ಮಂದಿ ಈಗಾಗಲೇ 'ಮೇಲ್-ಇನ್' ಮೂಲಕ ಮತದಾನ ಮಾಡಿದ್ದಾರೆ ಎಂದು ಯುನಿವರ್ಸಿಟಿ ಆಫ್ ಫ್ಲೋರಿಡಾದ ಎಲೆಕ್ಷನ್ ಲ್ಯಾಬ್ ತಿಳಿಸಿದೆ.
ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 4 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ನಾಳೆ ಬೆಳಿಗ್ಗೆ 6.30ರವರೆಗೆ (ಅಮೆರಿಕದ ಕಾಲಮಾನದ ಪ್ರಕಾರ ಬೆಳಗ್ಗೆ 6 ರಿಂದ ರಾತ್ರಿ 8 ಗಂಟೆ) ಮತದಾನ ನಡೆಯಲಿದೆ.
ಹೊಸದಾಗಿ ಆಯ್ಕೆಯಾದ ಅಧ್ಯಕ್ಷರ ಅಧಿಕಾರಾವಧಿಯು ಜನವರಿ 2025ರಿಂದ ನಾಲ್ಕು ವರ್ಷಗಳವರೆಗೆ ಇರಲಿದೆ. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಿನ್ನೆ ಕೊನೆಯ ಹಂತದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.
ಮಿಚಿಗನ್ ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ್ದ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್, ಯುಎಸ್ ಗೆ ಹೊಸ ಅಧ್ಯಾಯ ಪ್ರಾರಂಭಕ್ಕೆ ಅವಕಾಶವಿದೆ ಎಂದು ಹೇಳಿದ್ದಾರೆ. ಅಮೆರಿಕದ ಭರವಸೆ, ಏಕತೆ, ಆಶಾವಾದ ಮತ್ತು ಮಹಿಳಾ ಹಕ್ಕುಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದಾರೆ. ಉತ್ತರ ಕೆರೊಲಿನಾದ ರೇಲಿ ಪ್ರದೇಶದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ತಮ್ಮ ಕೊನೆಯ ದಿನದ ಪ್ರಚಾರದಲ್ಲಿ ಯುಎಸ್-ಮೆಕ್ಸಿಕೊ ಗಡಿಯ ಭದ್ರತೆ, ಆರ್ಥಿಕ ಸುಧಾರಣೆ ಪ್ರಮುಖ ವಿಷಯವಾಗಿಟ್ಟು ಪ್ರಚಾರ ನಡೆಸಿದ್ದರು.