ಅಫ್ಘಾನ್: ಬ್ಯೂಟಿಪಾರ್ಲರ್‌ ಗಳ ಮುಚ್ಚುಗಡೆಗೆ ತಾಲಿಬಾನ್ ಆದೇಶ

Update: 2023-07-04 17:01 GMT

ಸಾಂದರ್ಭಿಕ ಚಿತ್ರ \ Photo: PTI

ಕಾಬೂಲ್: ದೇಶಾದ್ಯಂತದ ಬ್ಯೂಟಿಪಾರ್ಲರ್‌ಗಳನ್ನು ಒಂದು ತಿಂಗಳೊಳಗೆ ಮುಚ್ಚುವಂತೆ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಆದೇಶಿಸಿದೆ.

ದೇಶದಲ್ಲಿ ಬ್ಯೂಟಿಪಾರ್ಲರ್ಗಳನ್ನು ನಿಷೇಧಿಸುವ ಕುರಿತಾದ ನೂತನ ಆದೇಶವನ್ನು ಯಾಕೆ ನೀಡಲಾಯಿತೆಂಬ ಬಗ್ಗೆ ಯಾವುದೇ ಹೇಳಿಕೆ ನೀಡಲು ‘ಸನ್ನಡತೆಗೆ ಉತ್ತೇಜನ ಹಾಗೂ ದುರ್ನಡತೆ ತಡೆ’ ಸಚಿವಾಲಯದ ವಕ್ತಾರ ಮುಹಮ್ಮದ್ ಸಾದಿಕ್ ಆಕೀಫ್ ಮುಜಾಹಿರ್ ನಿರಾಕರಿಸಿದ್ದಾರೆ.

ತಮ್ಮ ವ್ಯವಹಾರಗಳನ್ನು ನಿಲ್ಲಿಸಲು ಬ್ಯೂಟಿಪಾರ್ಲರ್ಗಳಿಗೆ ಕಾಲಾವಕಾಶವನ್ನು ನೀಡಲಾಗಿದೆ ಹಾಗೂ ತಮ್ಮಲ್ಲಿರುವ ಸಂಗ್ರಹಗಳನ್ನು ಖಾಲಿ ಮಾಡುವ ಮೂಲಕ ಅವರು ಯಾವುದೇ ನಷ್ಟವಿಲ್ಲದೆ ತಮ್ಮ ಉದ್ಯಮಗಳನ್ನು ಕೊನೆಗೊಳಿಸಬಹುದಾಗಿದೆ ಎಂದು ಮುಜಾಹಿರ್ ತಿಳಿಸಿದ್ದಾರೆ.

ತಾಲಿಬಾನ್ ನ ಸರ್ವೋಚ್ಚ ನಾಯಕನ ಮೌಖಿಕ ಸೂಚನೆಯಂತೆ ಬ್ಯೂಟಿಪಾರ್ಲರ್ಗಳ ಮುಚ್ಚುಗಡೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಅಮೆರಿಕ ನೇತೃತ್ವದ ಪಡೆಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಬಳಿಕ ರಾಜಧಾನಿ ಕಾಬೂಲ್ ಹಾಗೂ ಇತರ ನಗರಗಳಲ್ಲಿ ಬ್ಯೂಟಿಪಾರ್ಲರ್ಗಳು ವ್ಯಾಪಕವಾಗಿ ತಲೆಯೆತ್ತಿದ್ದವು.

2021ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಬಳಿಕ ಅದು ಹೆಣ್ಣುಮಕ್ಕಳು ಹಾಗೂ ಮಹಿಳೆಯರು ಹೈಸ್ಕೂಲ್ಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುವುದನ್ನು, ಪಾರ್ಕ್ಗಳು,ಮೋಜಿನ ಉತ್ಸವಗಳಿಗೆ ಪ್ರವೇಶವನ್ನು ನಿಷೇಧಿಸಿದೆ.

ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಹಾಗೂ ಎನ್ಜಿಓಗಳಲ್ಲಿಯೂ ಕೆಲಸ ಮಾಡದಂತೆ ಮಹಿಳೆಯರಿಗೆ ತಾಲಿಬಾನ್ ನಿಷೇಧ ವಿಧಿಸಿದೆ. ಸಾವಿರಾರು ಮಹಿಳೆಯರನ್ನು ಸರಕಾರಿ ಉದ್ಯೋಗಗಳಿಂದ ಕಿತ್ತುಹಾಕಲಾಗಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಹಾಗೂ ಬಾಲಕಿಯರ ಪರಿಸ್ಥಿತಿ ಜಗತ್ತಿನಲ್ಲೇ ಅತ್ಯಂತ ಕೆಟ್ಟದಾಗಿದೆ ಎಂದು ಕಳೆದ ವಾರ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಅಫ್ಘಾನ್ ಪ್ರತಿನಿಧಿಯಾದ ರಿಚರ್ಡ್ ಬೆನ್ನೆಟ್ ಅವರು ಸಲ್ಲಿಸಿದ ವರದಿಯು ಕಳವಳ ವ್ಯಕ್ತಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News