ಬೇಹುಗಾರಿಕೆ ಆರೋಪ | ಬ್ರಿಟನ್‍ನ 6 ರಾಜತಾಂತ್ರಿಕರನ್ನು ಉಚ್ಛಾಟಿಸಿದ ರಶ್ಯ
Update: 2024-09-13 16:27 GMT
ಮಾಸ್ಕೋ : ಬ್ರಿಟನ್‍ನ 6 ರಾಜತಾಂತ್ರಿಕರು ಬೇಹುಗಾರಿಕೆ ಮತ್ತು ವಿಧ್ವಂಸಕ ಚಟುವಟಿಕೆ ನಡೆಸುತ್ತಿದ್ದರು ಎಂದು ಆರೋಪಿಸಿರುವ ರಶ್ಯದ ಫೆಡರಲ್ ಭದ್ರತಾ ಇಲಾಖೆ ಅವರ ಮಾನ್ಯತೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದಿದೆ.
ಅವರನ್ನು ದೇಶದಿಂದ ಉಚ್ಛಾಟಿಸಲಾಗುವುದು ಎಂದು ರಶ್ಯದ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ವರದಿ ಮಾಡಿದೆ. ಬ್ರಿಟನ್ ವಿದೇಶಾಂಗ ಇಲಾಖೆಯ ಒಂದು ವಿಭಾಗವು ಈ ರಾಜತಾಂತ್ರಿಕರನ್ನು ರಶ್ಯಕ್ಕೆ ಕಳುಹಿಸಿದ್ದು ನಮ್ಮ ದೇಶಕ್ಕೆ ಕಾರ್ಯತಂತ್ರದ ಸೋಲು ಉಂಟು ಮಾಡುವುದು ಅವರ ಮುಖ್ಯ ಕೆಲಸವಾಗಿತ್ತು. ಅವರು ಗುಪ್ತಚರ ಮಾಹಿತಿ ಕಲೆಹಾಕುವುದು ಮತ್ತು ವಿಧ್ವಂಸಕ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಫೆಡರಲ್ ಭದ್ರತಾ ಇಲಾಖೆಯ ಅಧಿಕಾರಿ ಹೇಳಿದ್ದಾರೆ.
ಉಕ್ರೇನ್‍ಗೆ 1.5 ಶತಕೋಟಿ ಡಾಲರ್ ಮೌಲ್ಯದ ಹೆಚ್ಚುವರಿ ನೆರವು ಒದಗಿಸುವುದಾಗಿ ಅಮೆರಿಕ ಮತ್ತು ಬ್ರಿಟನ್ ಘೋಷಿಸಿದ ಬೆನ್ನಲ್ಲೇ ರಶ್ಯ ಈ ಕ್ರಮ ಕೈಗೊಂಡಿದೆ.