ಚೀನಾದ ಆಮದಿನ ಮೇಲೆ ಭಾರೀ ಸುಂಕ ವಿಧಿಸಿದ ಅಮೆರಿಕ
ವಾಷಿಂಗ್ಟನ್ : ಚೀನಾದಿಂದ ಆಮದಾಗುವ ಬ್ಯಾಟರಿಗಳು, ವಿದ್ಯುತ್‍ಚಾಲಿತ ವಾಹನಗಳು, ಉಕ್ಕು, ಅಲ್ಯುಮೀನಿಯಂ ಮುಂತಾದ ವಸ್ತುಗಳ ಮೇಲೆ ಭಾರೀ ಆಮದು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.
ಚೀನಾದಿಂದ ಆಮದಾಗುವ ವಿದ್ಯುತ್ ವಾಹನಗಳ ಮೇಲೆ 100%, ಸೆಮಿಕಂಡಕ್ಟರ್ ಗಳ ಮೇಲೆ 50% ಮತ್ತು ವಿದ್ಯುತ್ ವಾಹನಗಳ ಬ್ಯಾಟರಿಗಳ ಮೇಲೆ 25% ಸುಂಕ ವಿಧಿಸಲಾಗುವುದು. ಇದು ಅನ್ಯಾಯದ ವ್ಯಾಪಾರ ಪದ್ಧತಿಗೆ ತಡೆಯೊಡ್ಡಿ ಅಮೆರಿಕದ ಪ್ರಜೆಗಳು ತಮಗೆ ಇಷ್ಟಬಂದ ಕಾರುಗಳನ್ನು ಖರೀದಿಸುವ ಅವಕಾಶವನ್ನು ಮುಂದುವರಿಸುತ್ತದೆ. ನಾನು ಚೀನಾದ ಜತೆ ನ್ಯಾಯಸಮ್ಮತ ಪೈಪೋಟಿ ಬಯಸುತ್ತೇನೆ, ಸಂಘರ್ಷವನ್ನಲ್ಲ. 21ನೇ ಶತಮಾನದ ಆರ್ಥಿಕ ಸ್ಪರ್ಧೆಯನ್ನು ಚೀನಾದ ವಿರುದ್ಧ ಗೆಲ್ಲಲು ನಾವು ಎಲ್ಲರಿಗಿಂತ ಬಲವಾದ ಸ್ಥಾನದಲ್ಲಿರುತ್ತೇವೆ. ಯಾಕೆಂದರೆ ನಾವು ಮತ್ತೆ ಅಮೆರಿಕಾದಲ್ಲಿ ಹೂಡಿಕೆ ಮಾಡುತ್ತಿದ್ದೇವೆ' ಎಂದು ಶ್ವೇತಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬೈಡನ್ ಹೇಳಿದರು.
ಚೀನಾ ಸರಕಾರ ಉಕ್ಕು, ಅಲ್ಯುಮೀನಿಯಂ, ಸೆಮಿಕಂಡಕ್ಟರ್ ಗಳು, ವಿದ್ಯುತ್ ವಾಹನಗಳು, ಸೋಲಾರ್ ಪ್ಯಾನೆಲ್‍ಗಳು ಹಾಗೂ ಮಾಸ್ಕ್, ಕೈಗವಸು(ಗ್ಲೌಸ್) ಇತ್ಯಾದಿ ಅಗತ್ಯದ ಆರೋಗ್ಯ ಸಾಧನಗಳನ್ನು ಉತ್ಪಾದಿಸುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದೆ. ಈ ಉತ್ಪನ್ನಗಳ ಮೇಲೆ ಗಮನಾರ್ಹ ಪ್ರಮಾಣದ ಸಬ್ಸಿಡಿಯನ್ನೂ ಒದಗಿಸುತ್ತಿರುವುದರಿಂದ ಚೀನಾದ ಸಂಸ್ಥೆಗಳು ಜಾಗತಿಕ ಬೇಡಿಕೆಗಿಂತ ಹಲವು ಪಟ್ಟು ಹೆಚ್ಚು ಉತ್ಪಾದನೆ ಮಾಡುತ್ತವೆ. ಹೀಗಾಗಿ ಕಡಿಮೆ ಬೆಲೆಯಲ್ಲಿ ಈ ವಸ್ತುಗಳನ್ನು ಜಾಗತಿಕ ಮಾರುಕಟ್ಟೆಗೆ ಸುರಿಯಲಾಗುತ್ತದೆ. ಸರಕಾರದ ಸಬ್ಸಿಡಿಯಿಂದಾಗಿ ಚೀನಾದ ಸಂಸ್ಥೆಗಳು ಕಡಿಮೆ ಬೆಲೆಯಲ್ಲಿ ಮಾರಲು ಸಾಧ್ಯವಾಗುತ್ತದೆ. ಇದರಿಂದ ವಿಶ್ವದಾದ್ಯಂತ ಹಲವು ಸಂಸ್ಥೆಗಳು ಬಾಗಿಲು ಮುಚ್ಚುವಂತಾಗಿದೆ ಎಂದು ಬೈಡನ್ ಪ್ರತಿಪಾದಿಸಿದ್ದಾರೆ.
ಅಮೆರಿಕದ ಕ್ರಮವನ್ನು ಖಂಡಿಸಿರುವ ಚೀನಾ, ಹೆಚ್ಚುವರಿ ಆಮದು ಸುಂಕ ವಿಧಿಸುವುದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಿದೆ. ತನ್ನ ತಪ್ಪು ಕ್ರಮಗಳನ್ನು ತಕ್ಷಣ ಸರಿಪಡಿಸಿಕೊಂಡು ಚೀನಾದ ಆಮದಿನ ಮೇಲೆ ವಿಧಿಸಿರುವ ಹೆಚ್ಚುವರಿ ತೆರಿಗೆ ಕ್ರಮಗಳನ್ನು ರದ್ದುಪಡಿಸಬೇಕೆಂದು ಅಮೆರಿಕವನ್ನು ಆಗ್ರಹಿಸುವುದಾಗಿ ಚೀನಾದ ವಾಣಿಜ್ಯ ಸಚಿವಾಲಯ ಹೇಳಿಕೆ ನೀಡಿದೆ.