ಅಮೆರಿಕ | 11 ಜನರಿಗೆ ಅಧ್ಯಕ್ಷರ ಕ್ಷಮಾದಾನ

Update: 2024-04-25 16:41 GMT

 Photo: PTI

ವಾಷಿಂಗ್ಟನ್ : ಹಿಂಸಾತ್ಮಕವಲ್ಲದ ಮಾದಕವಸ್ತು ಅಪರಾಧಗಳಿಗಾಗಿ ಶಿಕ್ಷೆಗೊಳಗಾದ 11 ಜನರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕ್ಷಮಾದಾನ ನೀಡಿದ್ದು ಇತರ 5 ಮಂದಿಯ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿನ ಜನಾಂಗೀಯ ಅಸಮಾನತೆಗಳನ್ನು ಗಮನದಲ್ಲಿರಿಸಿಕೊಂಡು ಅಧ್ಯಕ್ಷರು ತಮ್ಮ ಕ್ಷಮಾದಾನದ ಅಧಿಕಾರವನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.

ಎಪ್ರಿಲ್ ತಿಂಗಳಲ್ಲಿ ಕ್ಷಮಾದಾನ ಪಡೆದವರು ಹಾಲಿ ಕಾನೂನಿಡಿ ಅನುಭವಿಸಬೇಕಾದ ಶಿಕ್ಷೆಗಿಂತ ಹೆಚ್ಚಿನ ಪ್ರಮಾಣದ ಶಿಕ್ಷೆಗೆ ಗುರಿಯಾಗಿದ್ದವರು. ನನ್ನ ಈ ಹಿಂದಿನ ಕ್ಷಮಾದಾನ ಪ್ರಕ್ರಿಯೆಯಂತೆ, ಇದೂ ಕೂಡಾ ಸಾರ್ವಜನಿಕ ಭದ್ರತೆಯನ್ನು ಸುಧಾರಿಸಲು ಮತ್ತು ಜನಾಂಗೀಯ ಅಸಮಾನತೆಗಳನ್ನು ಪರಿಹರಿಸಲು ನನ್ನ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಕ್ಷಮಾದಾನ ಪಡೆಯುವವರು ತಮ್ಮ ಬದುಕನ್ನು ಉತ್ತಮ ರೀತಿಯಲ್ಲಿ ಮುಂದುವರಿಸಲು ಮತ್ತು ಸಮುದಾಯಕ್ಕೆ ಒಳ್ಳೆಯದಾಗುವ ಕೆಲಸಗಳನ್ನು ಮಾಡುವ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಶಿಕ್ಷೆಯ ಅವಧಿ ಕಡಿತಗೊಂಡವರು ಜೈಲಿನ ಹೊರಗೆ ಹೊಸ ಬದುಕು ಕಟ್ಟಿಕೊಳ್ಳುವ ಅವಕಾಶ ಪಡೆದಿದ್ದಾರೆ ಎಂದು ಬೈಡನ್ ಹೇಳಿದ್ದಾರೆ.

ಮಾದಕ ವಸ್ತು ಹೊಂದಿದ್ದ ಅಪರಾಧಕ್ಕೆ ಜೈಲುಶಿಕ್ಷೆಗೆ ಗುರಿಯಾಗಿದ್ದ ಹಲವು ಮಂದಿಗೆ 2023ರ ಡಿಸೆಂಬರ್ ನಲ್ಲಿ ಬೈಡನ್ ಕ್ಷಮಾದಾನ ಘೋಷಿಸಿದ್ದರು. ನವೆಂಬರ್‍ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಬಹುತೇಕ ಜೋ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಪೈಪೋಟಿಯಾಗಲಿದ್ದು ಕಪ್ಪುವರ್ಣೀಯರ ಬೆಂಬಲ ಪಡೆಯಲು ಜೋ ಬೈಡನ್ ತಂತ್ರ ಹೂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News