ಅಮೆರಿಕ | ವಲಸಿಗರ ಬಂಧನಕ್ಕೆ ಅವಕಾಶ ಕಲ್ಪಿಸುವ ಕಾನೂನಿಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ
ವಾಷಿಂಗ್ಟನ್ : ಮೆಕ್ಸಿಕೋದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವ ವಲಸಿಗರನ್ನು ಬಂಧಿಸಲು ಮತ್ತು ಗಡೀಪಾರು ಮಾಡಲು ಪೊಲೀಸರಿಗೆ ಅವಕಾಶ ಕಲ್ಪಿಸುವ ಟೆಕ್ಸಾಸ್ ರಾಜ್ಯದ ಕಾನೂನಿಗೆ ಅಮೆರಿಕದ ಸುಪ್ರೀಂಕೋರ್ಟ್ ಸೋಮವಾರ ತಾತ್ಕಾಲಿಕ ತಡೆ ನೀಡಿದೆ.
ರಿಪಬ್ಲಿಕನ್ನರು ಅಧಿಕಾರದಲ್ಲಿರುವ ಟೆಕ್ಸಾಸ್ ರಾಜ್ಯ ಜಾರಿಗೆ ತಂದಿರುವ `ಸೆನೆಟ್ ಬಿಲ್-4' ಎಂಬ ಹೆಸರಿನ ಕಾನೂನಿನ ಬಗ್ಗೆ ಜೋ ಬೈಡನ್ ನೇತೃತ್ವದ ಡೆಮೊಕ್ರಾಟಿಕ್ ಪಕ್ಷ ಆಕ್ಷೇಪ ಎತ್ತಿದೆ. ಇದೀಗ ಮಾರ್ಚ್ 13ರವರೆಗೆ ಈ ಕಾನೂನನ್ನು ಜಾರಿಗೊಳಿಸದಂತೆ ಅಮೆರಿಕದ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಅಮೆರಿಕದಲ್ಲಿ ಎಲ್ಲಾ ರಾಜ್ಯಗಳಲ್ಲೂ ವಲಸಿಗರಿಗೆ ಸಂಬಂಧಿಸಿದ ಪ್ರಕರಣ, ಪೊಲೀಸ್ ಇಲಾಖೆಯನ್ನು ಫೆಡರಲ್ ಸರಕಾರ ನಿಯಂತ್ರಿಸುತ್ತದೆ. ವಲಸಿಗರು ಅಕ್ರಮವಾಗಿ ಗಡಿ ದಾಟುವುದನ್ನು ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಪ್ರಕರಣ ಎಂದು ಟೆಕ್ಸಾಸ್ ಕಾನೂನಿನಲ್ಲಿ ಉಲ್ಲೇಖಿಸಿದೆ. ಆದರೆ ಇದು ಅಸಂವಿಧಾನಿಕ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ. ಮೆಕ್ಸಿಕೋದಿಂದ ರಿಯೊ ಗ್ರಾಂಡೆ ನದಿಯ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವ ವಲಸಿಗರನ್ನು ತಡೆಯಲು ನದಿಯಲ್ಲಿ ಟೆಕ್ಸಾಸ್ ಸರಕಾರ ನಿರ್ಮಿಸಿರುವ `ತೇಲುವ ತಡೆಗೋಡೆ'ಯನ್ನು ತೆಗೆದುಹಾಕಲು ಸೂಚಿಸುವಂತೆ ಕೋರಿ ಫೆಡರಲ್ ನ್ಯಾಯಾಂಗ ಇಲಾಖೆಯು ಸುಪ್ರೀಂಕೋರ್ಟ್‍ಗೆ ಮತ್ತೊಂದು ಅರ್ಜಿ ಸಲ್ಲಿಸಿದೆ.
ಬೈಡನ್ ಆಡಳಿತಾವಧಿಯಲ್ಲಿ ಅಮೆರಿಕಕ್ಕೆ ಗಡಿ ನುಸುಳಿ ಬರುವ ವಲಸಿಗರ ಪ್ರಮಾಣ ಹೆಚ್ಚಿದೆ ಎಂದು ರಿಪಬ್ಲಿಕನ್ ಪಕ್ಷ ದೂಷಿಸಿದೆ. ಕಠಿಣ ವಲಸೆ ಸುಧಾರಣೆ ಕ್ರಮಗಳನ್ನು ಬೈಡನ್ ಆಡಳಿತ ಪ್ರಸ್ತಾವಿಸಿದ್ದರೂ, ಇದು ಉಕ್ರೇನ್‍ಗೆ ಮಿಲಿಟರಿ ನೆರವು ಕೋರಿದ ಪ್ರಸ್ತಾವನೆಯ ಜತೆ ಸೇರಿಕೊಂಡಿರುವುದರಿಂದ ಅಮೆರಿಕದ ಸಂಸತ್‍ನಲ್ಲಿ ತಡೆಹಿಡಿಯಲ್ಪಟ್ಟಿದೆ.