ಪಶ್ಚಿಮದಂಡೆ | ದಾಳಿಯಲ್ಲಿ ಭಾರತೀಯ ಮೂಲದ ಇಸ್ರೇಲಿ ಯೋಧ ಮೃತ್ಯು
ಜೆರುಸಲೇಂ : ಪಶ್ಚಿಮದಂಡೆಯಲ್ಲಿ ಇಸ್ರೇಲ್ ಸೈನಿಕರಿದ್ದ ಕಾವಲು ಠಾಣೆಯ ಮೇಲೆ ಫೆಲೆಸ್ತೀನ್ ವ್ಯಕ್ತಿಯೊಬ್ಬ ತನ್ನ ವಾಹನವನ್ನು ನುಗ್ಗಿಸಿದ ಘಟನೆಯಲ್ಲಿ ಭಾರತೀಯ ಮೂಲದ ಇಸ್ರೇಲ್ ಯೋಧ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಗುರುವಾರ ಪಶ್ಚಿಮದಂಡೆಯ ಅಸಾಫ್ ಜಂಕ್ಷನ್ ಬಳಿಯಿರುವ ಇಸ್ರೇಲ್ ಭದ್ರತಾ ಪಡೆಯ ಕಾವಲು ಠಾಣೆಗೆ ಫೆಲಸ್ತೀನ್ ವ್ಯಕ್ತಿಯೊಬ್ಬ ತನ್ನ ವಾಹನವನ್ನು ಅಪ್ಪಳಿಸಿದಾಗ ಠಾಣೆಯಲ್ಲಿದ್ದ 24 ವರ್ಷದ ಜೆರಿ ಗಿಡಿಯಾನ್ ಹಂಘಲ್ ಎಂಬ ಯೋಧ ಮೃತಪಟ್ಟಿದ್ದಾನೆ. ಈತ ಕೆಫಿರ್ ಬ್ರಿಗೇಡ್‍ನ ನಹ್ಷಾನ್ ಬಟಾಲಿಯನ್‍ನಲ್ಲಿ ಸ್ಟಾಫ್ ಸರ್ಜೆಂಟ್ ಆಗಿದ್ದ ಎಂದು ಇಸ್ರೇಲ್ ಸೇನೆ ಹೇಳಿದೆ. ಶಂಕಿತ ಆರೋಪಿಯನ್ನು ಪಶ್ಚಿಮದಂಡೆಯ ರಫಾತ್ ನಗರದ ನಿವಾಸಿ ಹಯಿಲ್ ಧೈಫಲ್ಲಾಹ್ ಎಂದು ಗುರುತಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಹಂಘಾಲ್ ಕುಟುಂಬ ಮಣಿಪುರದಿಂದ 2020ರಲ್ಲಿ ಇಸ್ರೇಲ್‍ಗೆ ವಲಸೆ ಹೋಗಿತ್ತು. ಭಾರತದ ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಮಿಝೋರಾಂನ ಬ್ನಿ ಮೆನಾಶೆ ಸಮುದಾಯದವರು ಇಸ್ರೇಲ್‍ನ ಮೆನಾಸ ಬುಡಕಟ್ಟಿನಿಂದ ಬಂದವರು ಎಂದು ನಂಬಲಾಗಿದ್ದು ಬ್ನಿ ಮೆನಾಶೆ ಸಮುದಾಯದ ಸುಮಾರು 300 ಯುವಕರು ಇಸ್ರೇಲ್‍ನ ಸೇನೆಯಲ್ಲಿದ್ದಾರೆ.