ಬಲೂಚಿಸ್ತಾನ ಉಗ್ರರ ದಾಳಿ ಪ್ರಕರಣ ಮೃತರ ಸಂಖ್ಯೆ 15ಕ್ಕೆ ಏರಿಕೆ: ವರದಿ
ಇಸ್ಲಮಾಬಾದ್: ನೈಋತ್ಯ ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತದಲ್ಲಿನ ಭಾರೀ ಭದ್ರತೆಯ ಸೆಂಟ್ರಲ್ ಮ್ಯಾಕ್ ಜೈಲಿನ ಮೇಲೆ ನಡೆದ ಮೂರು ಸಂಘಟಿತ ಭಯೋತ್ಪಾದಕ ದಾಳಿ ಹಾಗೂ ಆ ಬಳಿಕ ಭದ್ರತಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆ ಎಂದು ಪಾಕಿಸ್ತಾನದ ಸೇನೆ ಹೇಳಿದೆ.
ಇಬ್ಬರು ನಾಗರಿಕರು, 4 ಯೋಧರು ಹಾಗೂ 9 ಉಗ್ರರು ಮೃತಪಟ್ಟಿದ್ದಾರೆ. ಮೃತ ಉಗ್ರರಲ್ಲಿ ಮೂವರು ಆತ್ಮಾಹುತಿ ಬಾಂಬರ್‍ಗಳು ಸೇರಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಈ ಮಧ್ಯೆ, ಸಶಸ್ತ್ರ ಪ್ರತ್ಯೇಕತಾವಾದಿ ಸಂಘಟನೆ `ದಿ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್‍ಎ) ದಾಳಿಯ ಹೊಣೆಯನ್ನು ವಹಿಸಿಕೊಂಡಿದೆ ಎಂದು ಪ್ರಾಂತೀಯ ಸರಕಾರದ ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನದ ಅತೀ ದೊಡ್ಡ, ಆದರೆ ಅತ್ಯಂತ ಬಡ ಪ್ರಾಂತವಾಗಿರುವ ಬಲೂಚಿಸ್ತಾನದಲ್ಲಿ ಹೇರಳ ಪ್ರಾಕೃತಿಕ ಸಂಪತ್ತಿದೆ. ತೈಲ ಮತ್ತು ನೈಸರ್ಗಿಕ ಅನಿಲದ ನಿಕ್ಷೇಪಗಳಿಂದ ದೊರಕುವ ಆದಾಯದಲ್ಲಿ ನ್ಯಾಯೋಚಿತ ಪಾಲನ್ನು ಕೇಂದ್ರ ಸರಕಾರ ಹಸ್ತಾಂತರಿಸುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಈ ಮಧ್ಯೆ, ಬಲೂಚಿಸ್ತಾನದ ಪ್ರತ್ಯೇಕತೆಯನ್ನು ಪ್ರತಿಪಾದಿಸುತ್ತಿರುವ ಜನಾಂಗೀಯ ಪ್ರತ್ಯೇಕತಾವಾದಿ ಗುಂಪುಗಳು ಸರಕಾರದ ವಿರುದ್ಧ ಸಂಘರ್ಷ ನಡೆಸುತ್ತಿವೆ.