ಬಾಂಗ್ಲಾದೇಶ | ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿ, ಸೇನೆ ನಿಯೋಜನೆ
ಢಾಕಾ : ಬಾಂಗ್ಲಾದೇಶದಲ್ಲಿ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಬಳಿಕ ಆರಂಭಗೊಂಡಿರುವ ಹಿಂಸಾಚಾರ, ಘರ್ಷಣೆ ಮುಂದುವರಿದಿದ್ದು ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿದೆ. ಕನಿಷ್ಠ 1,500 ಮಂದಿ ಗಾಯಗೊಂಡಿರುವುದಾಗಿ ಎಎಫ್ಪಿಟ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.
ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು ಇಂಟರ್ ನೆಟ್ ನಿಷೇಧಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸೇನೆಯನ್ನು ನಿಯೋಜಿಸಲಾಗಿದ್ದು ನಾಗರಿಕ ಆಡಳಿತಕ್ಕೆ ಸಹಕಾರಿಯಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ ಒಬೈದುಲ್ ಖಾದರ್ ಘೋಷಿಸಿದ್ದಾರೆ. ಪ್ರಧಾನಿ ಶೇಖ್ ಹಸೀನಾ ತಮ್ಮ ವಿದೇಶ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಢಾಕಾದಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ನಡೆಸಿದ ಗೋಲೀಬಾರ್ನರಲ್ಲಿ ಓರ್ವ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ.
ಢಾಕಾದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಅತ್ಯಂತ ಅಸ್ಥಿರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದು ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಪ್ರತಿಭಟನೆ ಮುಂದುವರಿದಿದ್ದು ದೇಶದ ಹಲವೆಡೆ ಹಿಂಸಾಚಾರ, ಘರ್ಷಣೆ ವ್ಯಾಪಿಸಿದೆ ಎಂದು ಅಮೆರಿಕ ರಾಜತಾಂತ್ರಿಕರು ಹೇಳಿದ್ದಾರೆ. ಈ ಮಧ್ಯೆ ಬಾಂಗ್ಲಾದೇಶದಿಂದ ಶನಿವಾರ ಬೆಳಗ್ಗಿನವರೆಗೆ 778 ಭಾರತೀಯ ವಿದ್ಯಾರ್ಥಿಗಳು ವಿವಿಧ ಭೂ ಬಂದರುಗಳ ಮೂಲಕ ಸ್ವದೇಶಕ್ಕೆ ಮರಳಿದ್ದು 200 ವಿದ್ಯಾರ್ಥಿಗಳು ಢಾಕಾ ಮತ್ತು ಛತ್ತೀಸ್ಗಾಢ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಮರಳುತ್ತಿದ್ದಾರೆ. ಇನ್ನೂ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಾಂಗ್ಲಾದಲ್ಲಿ ಉಳಿದಿದ್ದು ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಭಾರತಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಲು ಬಾಂಗ್ಲಾದಲ್ಲಿನ ಭೂತಾನ್ ಮತ್ತು ನೇಪಾಳದ ವಿದ್ಯಾರ್ಥಿಗಳಿಗೆ ಅನುಮತಿಸಲಾಗಿದೆ ಎಂದು ಢಾಕಾದಲ್ಲಿನ ಭಾರತದ ಹೈಕಮಿಷನ್ ಹೇಳಿದೆ. ಕೋಲ್ಕತಾ-ಢಾಕಾ ಮೈತ್ರಿ ಎಕ್ಸ್ಪ್ರೆ ಸ್, ಬಂಧನ್ ಎಕ್ಸ್ಪ್ರೆದಸ್ ಸಹಿತ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಪೂರ್ವ ರೈಲ್ವೇ ಪ್ರಕಟಿಸಿದೆ.
ಶುಕ್ರವಾರ ಢಾಕಾ ಸುತ್ತಮುತ್ತ ಹಲವೆಡೆ ನಡೆದ ಘರ್ಷಣೆಯಲ್ಲಿ ಕನಿಷ್ಠ 300 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಸುಮಾರು 150 ಅಧಿಕಾರಿಗಳಿಗೆ ಪ್ರಥಮ ಚಿಕಿತ್ಸೆ ಒದಗಿಸಲಾಗಿದ್ದು ಉಳಿದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿರಾರು ಪ್ರತಿಭಟನಾಕಾರರು ಪೊಲೀಸರ ಜತೆ ಘರ್ಷಣೆ ನಡೆಸುತ್ತಿದ್ದಾರೆ ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ ವಕ್ತಾರರು ಹೇಳಿದ್ದಾರೆ.
► ಪ್ರಧಾನಿ ವಿದೇಶ ಪ್ರವಾಸ ರದ್ದು
ಪ್ರಧಾನಿ ಶೇಖ್ ಹಸೀನಾ ಅವರು ರವಿವಾರ ಸ್ಪೇನ್ ಮತ್ತು ಬ್ರೆಝಿಲ್ಗೆಾ ಯೋಜಿಸಿದ್ದ ರಾಜತಾಂತ್ರಿಕ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ಪ್ರಧಾನಿಯ ಪತ್ರಿಕಾ ಕಾರ್ಯದರ್ಶಿ ನಯೀಮುಲ್ ಇಸ್ಲಾಂರನ್ನು ಉಲ್ಲೇಖಿಸಿ ಎಎಫ್ಪಿಾ ಸುದ್ದಿಸಂಸ್ಥೆ ವರದಿ ಮಾಡಿದೆ. ಶನಿವಾರ ಢಾಕಾದಲ್ಲಿ ಸಾರ್ವಜನಿಕರು ಸಭೆ ಸೇರುವುದನ್ನು ನಿಷೇಧಿಸಲಾಗಿದೆ. ಪ್ರತಿಭಟನಾಕಾರರ ಗುಂಪು ರಸ್ತೆಗಳಲ್ಲಿ ಟೈರ್ ಗಳನ್ನು ಸುಟ್ಟು, ಹಲವು ವಾಹನಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದ್ದರಲ್ಲದೆ ಭದ್ರತಾ ಅಧಿಕಾರಿಗಳತ್ತ ಕಲ್ಲು, ಇಟ್ಟಿಗೆಗಳನ್ನು ಎಸೆದಿದ್ದಾರೆ. ದೇಶದಾದ್ಯಂತ ರೈಲು ಸೇವೆಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.